ADVERTISEMENT

ಸಂದೇಶ್‌ಖಾಲಿ ದೌರ್ಜನ್ಯ: ಬಿಜೆಪಿ, ಕಾಂಗ್ರೆಸ್‌ ನಿಯೋಗಗಳಿಗೆ ತಡೆ

ಸಂದೇಶ್‌ಖಾಲಿ ದೌರ್ಜನ್ಯ: ರಾಷ್ಟ್ರಪತಿಗೆ ವರದಿ ಸಲ್ಲಿಸಿದ ಎನ್‌ಸಿಎಸ್‌ಸಿ

ಪಿಟಿಐ
Published 17 ಫೆಬ್ರುವರಿ 2024, 0:27 IST
Last Updated 17 ಫೆಬ್ರುವರಿ 2024, 0:27 IST
   

ಕೋಲ್ಕತ್ತ: ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ಹಾಗೂ ಬೆಂಬಲಿಗರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಸಂದೇಶ್‌ಖಾಲಿಗೆ ತೆರಳುತ್ತಿದ್ದ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಪ್ರತ್ಯೇಕ ನಿಯೋಗವನ್ನು ಪೊಲೀಸರು ತಡೆದಿದ್ದಾರೆ.

ಬಿಜೆಪಿಯ ಸಂಸದರು ಹಾಗೂ ಕೇಂದ್ರ ಸಚಿವೆಯರಾದ ಪ್ರತಿಮಾ ಭೌಮಿಕ್‌, ಅನ್ನಪೂರ್ಣಾ ದೇವಿ ಅವರನ್ನೊಳಗೊಂಡ ಆರು ಮಂದಿಯ ನಿಯೋಗವನ್ನು ಪೊಲೀಸರು ರಾಮ್‌ಪುರದಲ್ಲಿ ಶುಕ್ರವಾರ ಬೆಳಿಗ್ಗೆ ತಡೆದಿದ್ದಾರೆ.

ಬಳಿಕ ತೆರಳಿದ ಪಶ್ಚಿಮ ಬಂಗಾಳದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ನೇತೃತ್ವದ ನಿಯೋಗಕ್ಕೂ ತಡೆಯೊಡ್ಡಲಾಗಿದೆ.

ADVERTISEMENT

ಸೆಕ್ಷನ್ 144 ಜಾರಿಯಲ್ಲಿರುವುದರಿಂದ ತಡೆಯೊಡ್ಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ಪ್ರತಿಮಾ ಭೌಮಿಕ್‌ ಹೇಳಿದರು. ಆರೋಪಿಗಳ ರಕ್ಷಣೆಗೆ ಪೊಲೀಸರು ಯತ್ನಿಸುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.

‘ದೌರ್ಜನ್ಯ ನಡೆದಿರುವ ಪ್ರದೇಶಕ್ಕೆ ನಾಲ್ಕೇ ಜನ ತೆರಳುತ್ತೇವೆ ಎಂದರೂ ಪೊಲೀಸರು ಒಪ್ಪಲಿಲ್ಲ. ಪೊಲೀಸರು ನಮ್ಮನ್ನು ತಡೆಯುವಲ್ಲಿ ತೋರಿಸಿರುವ ಚುರುಕುತನವನ್ನು ಶಹಜಹಾನ್‌ ಶೇಖ್‌ ಅವರನ್ನು ಬಂಧಿಸುವಲ್ಲಿಯೂ ತೋರಿಸಿದ್ದರೆ ಪರಿಸ್ಥಿತಿಯು ಭಿನ್ನವಾಗುತ್ತಿತ್ತು’ ಎಂದು  ಅನ್ನಪೂರ್ಣಾ ದೇವಿ ಹೇಳಿದರು.

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಬಿಜೆಪಿಯ ನಿಯೋಗದ ಸದಸ್ಯರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.