ADVERTISEMENT

ಕಾಂಡೋಮ್ ಬೇಕೆ? ಎಂದು IAS ಅಧಿಕಾರಿಣಿಯಿಂದ ಗೇಲಿಗೆ ಒಳಗಾಗಿದ್ದ ಬಾಲಕಿಗೆ ನೆರವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಅಕ್ಟೋಬರ್ 2022, 7:10 IST
Last Updated 1 ಅಕ್ಟೋಬರ್ 2022, 7:10 IST
ರಿಯಾ
ರಿಯಾ   

ಪಟ್ನಾ: ಸರ್ಕಾರ, ಬಾಲಕಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಬೇಕಲ್ಲವೇ.. ಎಂದು ಐಎಎಸ್ ಅಧಿಕಾರಿಯೊಬ್ಬರಿಗೆ ಬೇಡಿಕೆ ನೀಡಿ ಸುದ್ದಿಯಾಗಿದ್ದ ಬಿಹಾರದ ಹೈಸ್ಕೂಲ್ ಬಾಲಕಿರಿಯಾ ಕುಮಾರಿಗೆ ಇದೀಗ ಸಹಾಯ ಹರಿದು ಬರುತ್ತಿದೆ.

ಫ್ಯಾನ್ ಹೆಲ್ತ್ ಕೇರ್ ಸಂಸ್ಥೆ ರಿಯಾ ಕುಮಾರಿ ಅವರಿಗೆ ಒಂದು ವರ್ಷದ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಹಾಗೂ ಆಕೆಯ ಉನ್ನತ ಶಿಕ್ಷಣದವರೆಗಿನ ವೆಚ್ಚವನ್ನು ನೀಡುವುದಾಗಿ ಭರವಸೆ ನೀಡಿದೆ. ಅಲ್ಲದೇ ಅನೇಕ ಸ್ಯಾನಿಟರಿ ಪ್ಯಾಡ್‌ ತಯಾರಿಕೆ ಸಂಸ್ಥೆಗಳು ಕೂಡ ಇದೇ ರೀತಿಯ ಸಹಾಯ ಹಸ್ತ ನೀಡಲು ಮುಂದೆ ಬಂದಿವೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಫ್ಯಾನ್ ಹೆಲ್ತ್ ಕೇರ್ ಸಂಸ್ಥೆ ಸಿಇಒ ಚಿರಾಗ್ ಅವರು, ರಿಯಾ ಕುಮಾರಿ ಹೆಣ್ಣುಮಕ್ಕಳು ಮುಕ್ತವಾಗಿ ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಮಾತನಾಡಲು ಕಾರಣರಾಗಿದ್ದಾರೆ. ಭಾರತದಲ್ಲಿ ಈ ಬಗ್ಗೆ ಹಿನ್ನಡೆ ಇದೆ. ಇದು ನಿಲ್ಲಬೇಕು ಎಂದು ಹೇಳಿದ್ದಾರೆ.

ADVERTISEMENT

ಬಿಹಾರದ ಪಟ್ನಾದಲ್ಲಿ ಮಹಿಳಾ ಅಭಿವೃದ್ಧಿ ನಿಗಮವು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ,ಐಎಎಸ್‌ ಅಧಿಕಾರಿ ನಿಗಮದ ನಿರ್ದೇಶಕಿ ಹರ್ಜೋತ್ ಕೌರ್ ಭಮ್ರಾ ಅವರುಸರ್ಕಾರವು ಕಾಂಡೋಮ್‌ ಸಹ ನೀಡಲಿ ಎಂದು ನೀವು ಬಯಸುತ್ತೀರಿ ಅಲ್ಲವೇ? ಎಂದು ರಿಯಾ ಕುಮಾರಿ ಪ್ರಶ್ನೆಗೆ ಅವಮಾನಿಸುವ ರೀತಿಯಲ್ಲಿ ಪ್ರಶ್ನಿಸುವ ವಿಡಿಯೊ ವೈರಲ್ ಆಗಿತ್ತು.

ಭಮ್ರಾ ಅವರ ಹೇಳಿಕೆಗೆ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಭಮ್ರಾ ವಿದ್ಯಾರ್ಥಿನಿ ಮೇಲೆ ಕಿಡಿಕಾರಿದ್ದರು.

ಸಂವಾದದಲ್ಲಿ ರಿಯಾ,‘ಸರ್ಕಾರವು ಶಾಲಾ ವಿದ್ಯಾರ್ಥಿನಿಯರಿಗೆ ಕಡಿಮೆ ದರದಲ್ಲಿ ಸ್ಯಾನಿಟರಿ ಪ್ಯಾಡ್‌ ನೀಡುವ ವ್ಯವಸ್ಥೆ ಮಾಡಬಹುದೇ’ ಎಂದು ಪ್ರಶ್ನಿಸಿದ್ದಾಳೆ. ಆಗ ಭಮ್ರಾ ಅವರು, ‘ಸರ್ಕಾರವು ಜೀನ್ಸ್‌ ಸಹ ನೀಡಲಿ ಎಂದು ನಾಳೆ ಬಯಸುತ್ತೀರಿ. ಕೊನೆಗೆ, ಕಾಂಡೋಮ್‌ ಅನ್ನೂ ಸರ್ಕಾರ ನೀಡಲಿ ಎಂದು ಬಯಸುತ್ತೀರಿ. ಸರ್ಕಾರ ಕಾಂಡೋಮ್‌ ನೀಡಬೇಕೆ’ ಎಂದು ಕೇಳಿದ್ದಾರೆ.

ಆಗ ವಿದ್ಯಾರ್ಥಿನಿ, ‘ಸೇವೆ ಮಾಡಲಿ ಎಂದಲ್ಲವೇ ನಾವು ಮತ ನೀಡುವುದು’ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಭಮ್ರಾ ಅವರು, ‘ಇದು ಮೂರ್ಖತನದ ಪರಮಾವಧಿ. ಹಾಗಿದ್ದಲ್ಲಿ ಮತ ಹಾಕಬೇಡಿ. ಇದು ಪಾಕಿಸ್ತಾನವಾಗಲಿ’ ಎಂದಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪವ್ಯಕ್ತಪಡಿಸಿದ ವಿದ್ಯಾರ್ಥಿನಿ, ‘ಇದ್ಯಾಕೆ ಪಾಕಿಸ್ತಾನವಾಗಬೇಕು. ಇದು ಭಾರತ. ನಾನು ಭಾರತೀಯಳು’ ಎಂದು ತಿರುಗೇಟು ನೀಡಿದ್ದಾಳೆ.

ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಈ ವಿಡಿಯೊ ಸಾವಿರಾರು ಬಾರಿ ಹಂಚಿಕೆಯಾಗಿದೆ. ಆದರೆ, ‘ನಾನು ಆ ಹೇಳಿಕೆ ನೀಡಿಯೇ ಇಲ್ಲ’ ಎಂದು ಭಮ್ರಾ ಹೇಳಿದ್ದರು.

ಕೈಗೆಟುಕ ದರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ ಸೌಲಭ್ಯದ ಬಗ್ಗೆ ಪ್ರಶ್ನೆ ಕೇಳಿದ ರಿಯಾಗೆ, ಅಸಮಂಜಸ ಮತ್ತು ತೀವ್ರ ಆಕ್ಷೇಪಾರ್ಹ ಉತ್ತರ ನೀಡಿರು‌ವ ಐಎಎಸ್‌ ಮಹಿಳಾ ಅಧಿಕಾರಿಯಿಂದ ರಾಷ್ಟ್ರೀಯ ಮಹಿಳಾ ಆಯೋಗವೂ (ಎನ್‌ಸಿಡಬ್ಲ್ಯು) ವಿವರಣೆಯನ್ನೂ ಕೇಳಿದೆ. ಈ ಬಗ್ಗೆ ಅಧಿಕಾರಿ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.