ADVERTISEMENT

ಸಂಜೀವ್‌ ಚತುರ್ವೇದಿ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ 16 ನ್ಯಾಯಮೂರ್ತಿಗಳು

ಪಿಟಿಐ
Published 12 ಅಕ್ಟೋಬರ್ 2025, 1:11 IST
Last Updated 12 ಅಕ್ಟೋಬರ್ 2025, 1:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಉತ್ತರಾಖಂಡ ಕೇಡರ್‌ನ ಐಎಫ್‌ಎಸ್‌ ಅಧಿಕಾರಿ ಸಂಜೀವ್‌ ಚತುರ್ವೇದಿ  ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇದುವರೆಗೆ ವಿಚಾರಣೆಯಿಂದ 16 ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ. ಇದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ದಾಖಲೆಯಾಗಿದೆ.  

ಹೈಕೋರ್ಟ್‌ನಲ್ಲಿ ನಿರ್ದಿಷ್ಟ ವ್ಯಕ್ತಿಗೆ ಸಂಬಂಧಿಸಿದ ವಿಚಾರಣೆಯಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನ್ಯಾಯಮೂರ್ತಿಗಳು ಹಿಂದೆ ಸರಿದಿರುವ ಬೇರೆ ಉದಾಹರಣೆ ಇಲ್ಲ. ಜತೆಗೆ ಈ ಪ್ರಕರಣದಲ್ಲಿ ಯಾವುದೇ ನಿರ್ದಿಷ್ಟ ಕಾರಣ’ ಉಲ್ಲೇಖಿಸದೆ  ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿರುವುದು ಕೂಡ ಅಪರೂಪದ ವಿದ್ಯಮಾನ ಎನಿಸಿದೆ.

ADVERTISEMENT

ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠವು ಕಳೆದ ಆಗಸ್ಟ್‌ 29ರವರೆಗೆ ಚತುರ್ವೇದಿ ಅವರಿಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಈ ಪೀಠದಲ್ಲಿದ್ದ ನ್ಯಾಯಮೂರ್ತಿ ಅಲೋಕ್‌ ವರ್ಮಾ ಅವರು, ಅ.8ರಂದು ದಿಢೀರ್‌ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು. ಚತುರ್ವೇದಿ ಪ್ರಕರಣದಲ್ಲಿ ವಿಚಾರಣೆಯಿಂದ ಹಿಂದೆ ಸರಿದ 16ನೇ ನ್ಯಾಯಮೂರ್ತಿ ಇವರು. 

ಇದಕ್ಕೂ ಮುನ್ನ ಅಂದರೆ, ಕೇವಲ 12 ದಿನಗಳ ಹಿಂದಷ್ಟೇ ಈ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿ ರವೀಂದ್ರ ಮೈಥಾನಿ ಹಿಂದೆ ಸರಿದಿದ್ದರು. ‘ನಾನು ಸದಸ್ಯನಲ್ಲದ ಇನ್ನೊಂದು ಪೀಠವು ಈ ಪ್ರಕರಣದ ವಿಚಾರಣೆ ನಡೆಸಲಿದೆ’ ಎಂದು ಹೇಳಿದ್ದರು. ನ್ಯಾಯಮೂರ್ತಿ ಅಲೋಕ್‌ ವರ್ಮಾ ಕೂಡ ಇದನ್ನೇ ಹೇಳಿದ್ದಾರೆ.

ಇವರಿಬ್ಬರಿಗೆ ಮೊದಲು ನ್ಯಾಯಮೂರ್ತಿ ರಾಕೇಶ್‌ ತಾಪ್ಲಿಯಾಲ್‌ 2023ರಲ್ಲಿ, ಚತುರ್ವೇದಿ ವಿರುದ್ಧದ  ಭ್ರಷ್ಟಾಚಾರ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಆನಂತರ 2024ರ ಫೆಬ್ರುವರಿಯಲ್ಲಿ  ನ್ಯಾಯಮೂರ್ತಿ ಮನೋಜ್‌ ತಿವಾರಿ ಅವರು, ಚತುರ್ವೇದಿ ಅವರ ಕೇಂದ್ರದ ನಿಯೋಜನೆಗೆ ಸಂಬಂಧಿಸಿದ  ವಿಚಾರಣೆಯಿಂದ ಹಿಂದೆ ಸರಿದಿದ್ದರು. ಇವರಲ್ಲಿ ಯಾರೂ ವಿಚಾರಣೆಯಿಂದ ಹಿಂದೆ ಸರಿಯಲು ಯಾವುದೇ ನಿರ್ದಿಷ್ಟ ಕಾರಣ ಉಲ್ಲೇಖಿಸಿಲ್ಲ. 

ಚತುರ್ವೇದಿ ಅವರು, ‘ಸಿಎಟಿ’ ನ್ಯಾಯಮುರ್ತಿ ಮನೀಶ್‌ ಗಾರ್ಗ್‌ ವಿರುದ್ಧ ದಾಖಲಿಸಿದ್ದ ಮಾನನಷ್ಟ ಪ್ರಕರಣದ ವಿಚಾರಣೆ ನಡೆಸುವುದರಿಂದ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ (ಎಸಿಜೆಎಂ)  ನೇಹಾ ಕುಶ್ವಾಹ ಅವರು  ’ಕುಟುಂಬ ಸಂಬಂಧ‘ ಕಾರಣವನ್ನು ಮುಂದಿಟ್ಟು ಇದೇ ಏಪ್ರಿಲ್‌ನಲ್ಲಿ ಹಿಂದೆ ಸರಿದಿದ್ದರು.  

’ಉದ್ದೇಶಪೂರ್ವಕ ಅಸಹಕಾರ’ ತೋರುತ್ತಿದ್ದಾರೆ ಎಂದು ಆರೋಪಿಸಿ ಸಂಜೀವ್‌ ಚತುರ್ವೇದಿ, ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮತ್ತು ಕೋರ್ಟ್‌ ರಿಜಿಸ್ಟ್ರಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ  

ವಿಚಾರಣೆಯಿಂದ ಹಿಂದೆ ಸರಿದವರು

ಚತುರ್ವೇದಿ ಪ್ರಕರಣದಲ್ಲಿ ಈ ವರ್ಷದಲ್ಲೇ  ಆರು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.  ಇವರಲ್ಲಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ನ್ಯಾಯಮೂರ್ತಿಗಳಾದ ಹರ್ವಿಂದರ್‌ ಒಬೆರಾಯ್‌ ಮತ್ತು ಬಿ. ಆನಂದ್‌ ಕೂಡ ಸೇರಿದ್ದಾರೆ. ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ (ಎಸಿಜೆಎಂ)  ನೇಹಾ ಕುಶ್ವಾಹ ಕೂಡ ಕಳೆದ ಫೆಬ್ರುವರಿಯಲ್ಲಿ ವಿಚಾರಣೆಯಿಂದ ಹಿಂದೆ ಸರಿದಿದ್ದರು.  ಇದುವರೆಗೆ ಇಬ್ಬರು ಸುಪ್ರೀಂಕೊರ್ಟ್‌ನ ನ್ಯಾಯಮೂರ್ತಿಗಳು (ರಂಜನ್‌ ಗೊಗೊಯಿ ಮತ್ತು ಯು.ಯು ಲಲಿತ್‌–ಇಬ್ಬರೂ ನಿವೃತ್ತರಾಗಿದ್ದಾರೆ) ನಾಲ್ವರು ಹೈಕೋರ್ಟ್‌ ನ್ಯಾಯಮೂರ್ತಿಗಳು ಇಬ್ಬರು ಅಧೀನ ನ್ಯಾಯಾಲಯದ ನ್ಯಾಯಮೂರ್ತಿಗಳು ಮತ್ತು ಎಂಟು ಮಂದಿ ’ಸಿಎಟಿ’ ನ್ಯಾಯಮೂರ್ತಿಗಳು ಸಂಜೀವ್‌ ಚತುರ್ವೇದಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.