ADVERTISEMENT

ರಾಜೀವ್ ಗಾಂಧಿ ಹತ್ಯೆ ಅಪರಾಧಿ ಎಸ್. ಶಾಂತನ್ ನಿಧನ

ಪಿಟಿಐ
Published 28 ಫೆಬ್ರುವರಿ 2024, 10:52 IST
Last Updated 28 ಫೆಬ್ರುವರಿ 2024, 10:52 IST
<div class="paragraphs"><p>ಎಸ್‌. ಶಾಂತನ್‌</p></div>

ಎಸ್‌. ಶಾಂತನ್‌

   

ಸಂಗ್ರಹ ಚಿತ್ರ: ಪಿಟಿಐ

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಸುಮಾರು 31 ವರ್ಷ ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿದ್ದ ಎಸ್‌. ಶಾಂತನ್‌(55) ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.

ADVERTISEMENT

ಶಾಂತನ್ ಅಲಿಯಾಸ್ ಟಿ. ಸುತೇಂದ್ರರಾಜ ಮೂಲತಃ ಶ್ರೀಲಂಕಾ ಪ್ರಜೆಯಾಗಿದ್ದು, 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ 7 ಅಪರಾಧಿಗಳಲ್ಲಿ ಒಬ್ಬರಾಗಿದ್ದರು. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಶಾಂತನ್‌, 2022ರಲ್ಲಿ ಅವಧಿಪೂರ್ವವಾಗಿ ಬಿಡುಗಡೆಗೊಂಡಿದ್ದರು.

‘ಯಕೃತ್ತಿನ ವೈಫಲ್ಯದಿಂದ ಬಳಲುತ್ತಿದ್ದ ಶಾಂತನ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಮುಂಜಾನೆ 7.30 ವೇಳೆ ನಿಧನರಾದರು’ ಎಂದು ರಾಜೀವ್ ಗಾಂಧಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಡೀನ್ ಇ.ಥೆರನಿರಾಜನ್ ತಿಳಿಸಿದ್ದಾರೆ.

ಶಾಂತನ್ ಪಾರ್ಥಿವ ಶರೀರವನ್ನು ಶ್ರೀಲಂಕಾಗೆ ಕೊಂಡೊಯ್ಯಲಾಗುವುದು ಎಂದು ಶಾಂತನ್ ಪರ ವಕೀಲ ತಿಳಿಸಿದ್ದಾರೆ.

ಜೀವಾವಧಿ ಶಿಕ್ಷೆಯಿಂದ ಅವಧಿಪೂರ್ವ ಬಿಡುಗಡೆ..

1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ರಾಜೀವ್ ಅವರು ಚುನಾವಣಾ ಪ್ರಚಾರ ನಡೆಸುವಾಗ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿತ್ತು.

ಧನು ಎಂಬಾಕೆ ಬಾಂಬ್‌ ಸ್ಫೋಟಿಸಿಕೊಂಡು, ರಾಜೀವ್ ಅವರ ಹತ್ಯೆ ಮಾಡಿದ್ದಳು. ಹಂತಕರಾದ ಎ.ಜಿ.ಪೇರರಿವಾಳನ್‌, ನಳಿನಿ ಶ್ರೀಹರನ್‌, ಆಕೆಯ ಪತಿ ಮುರುಗನ್‌, ಶಾಂತನ್‌, ರಾಬರ್ಟ್ ಪಿಯಸ್, ಜಯಕುಮಾರ್ ಹಾಗೂ ರವಿಚಂದ್ರನ್ ಈ ಹತ್ಯೆಗೆ ಸಂಚು ರೂಪಿಸಿದ್ದರು.

1998ರಲ್ಲಿ ತಮಿಳುನಾಡಿನ ವಿಚಾರಣಾ ನ್ಯಾಯಾಲಯವು ಎಲ್ಲಾ ಹಂತಕರಿಗೆ ಮರಣದಂಡನೆ ಘೋಷಿಸಿತ್ತು. ಮರಣದಂಡನೆಯನ್ನು ಸುಪ್ರೀಂ ಕೋರ್ಟ್‌ 1999ರಲ್ಲಿ ಎತ್ತಿಹಿಡಿದಿತ್ತು.

ಮುರುಗನ್, ಶಾಂತನ್‌ ಮತ್ತು ಎ.ಜಿ.ಪೇರರಿವಾಳನ್‌ ಅವರು ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯು ಇತ್ಯರ್ಥವಾಗದೇ ದೀರ್ಘಾವಧಿ ಕಳೆದಿದೆ ಎಂಬ ಆಧಾರದಲ್ಲಿ 2014ರಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಗಿತ್ತು. ನಳಿನಿ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬೇಕು ಎಂದು ಸ್ವತಃ ಸೋನಿಯಾ ಗಾಂಧಿ ಅವರೇ ತಮಿಳುನಾಡಿನ ರಾಜ್ಯಪಾಲರಿಗೆ ಮನವಿ ಮಾಡಿದ್ದರು.

2022ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಮೇರೆಗೆ ಎಲ್ಲಾ ಅಪರಾಧಿಗಳನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.