ADVERTISEMENT

ಬಿ.ಎಲ್‌. ಸಂತೋಷ್‌ ತಂಡ ಅಂಡಮಾನ್‌ಗೆ

ಬಿಜೆಪಿ ನಾಯಕರಲ್ಲಿ ಹೆಚ್ಚಿದ ಕುತೂಹಲ

​ಪ್ರಜಾವಾಣಿ ವಾರ್ತೆ
Published 20 ಮೇ 2019, 19:39 IST
Last Updated 20 ಮೇ 2019, 19:39 IST
   

ಬೆಂಗಳೂರು: ಕೇಂದ್ರದಲ್ಲಿ ಎನ್‌ಡಿಎ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂಬುದಾಗಿ ಮತಗಟ್ಟೆ ಸಮೀಕ್ಷೆಗಳು ಹೊರ ಬಿದ್ದಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ನೇತೃತ್ವದಲ್ಲಿ ಮುಖಂಡರ ತಂಡ ಅಂಡಮಾನ್‌ ಪ್ರವಾಸಕ್ಕೆ ತೆರಳಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ವ್ಯಕ್ತವಾಗಿದ್ದು, ಈ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹರ್ಷದಿಂದ ಬೀಗುತ್ತಿದ್ದರೆ, ಸಂತೋಷ್‌ ಅವರೊಂದಿಗೆ 30 ಪದಾಧಿಕಾರಿಗಳು ಭಾನುವಾರ ಪ್ರವಾಸಕ್ಕೆ ತೆರಳಿದ್ದಾರೆ. ಅಲ್ಲಿ ರಾಜ್ಯ ರಾಜಕೀಯದ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮೂಲಗಳ ಪ್ರಕಾರ, ಅಂಡಮಾನ್‌ನಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ರಾಜ್ಯಗಳ ಬಿಜೆಪಿ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಚುನಾವಣೆಯಲ್ಲಿ ತಮಿಳುನಾಡಿನ ಜತೆಗೆ ಅಂಡಮಾನ್‌ ಜವಾಬ್ದಾರಿ ನೀಡಲಾಗಿತ್ತು. ಅವರು ಈ ಸಭೆ ಏರ್ಪಡಿಸಿದ್ದಾರೆ. ಅಲ್ಲದೆ, ಅಂಡಮಾನ್‌ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆಲ್ಲುವ ಸಾಧ್ಯತೆ ಇರುವುದರಿಂದ ಅಲ್ಲಿ ಸಂಭ್ರಮಾಚರಣೆ ನಡೆಸಲು ತೀರ್ಮಾನಿಸಲಾಗಿದೆ.

ADVERTISEMENT

ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ: ಲೋಕಸಭಾ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದಲ್ಲೂ ಬದಲಾವಣೆ ಆಗಲಿದೆ. ಈ ಹಿನ್ನೆಲೆಯಲ್ಲಿ ಸಂತೋಷ್‌ ಮತ್ತು ತಂಡದ ಪ್ರವಾಸ ಮಹತ್ವ ಪಡೆದಿದೆ. ಸಂತೋಷ್‌ ಮತ್ತು ಯಡಿಯೂರಪ್ಪ ಅವರ ಮಧ್ಯೆ ಶೀತಲ ಸಮರ ಬಹಳ ಕಾಲದಿಂದಲೂ ನಡೆದಿದೆ. ಯಡಿಯೂರಪ್ಪ ಅವರ ಜತೆ ಸುಮಧುರ ಸಂಬಂಧ ಹೊಂದಿಲ್ಲದ ನಳಿನ್‌ ಕುಮಾರ್ ಕಟೀಲ್‌, ಎಂ.ಬಿ. ಭಾನುಪ್ರಕಾಶ್‌, ನಿರ್ಮಲಕುಮಾರ ಸುರಾನ ಅವರು ಪ್ರವಾಸಕ್ಕೆ ತೆರಳಿರುವುದು ವಿಶೇಷ.

ಪಕ್ಷದ ಸಂಘಟನಾತ್ಮಕ ಬದಲಾವಣೆಗಳ ಬಗ್ಗೆಯೂ ಸಂತೋಷ್‌ ಮಾತುಕತೆ ನಡೆಸಲಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸಿದ ಬಳಿಕ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಮತ್ತು ಸಮ್ಮಿಶ್ರ ಸರ್ಕಾರ ಪತನಗೊಂಡರೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಚರ್ಚೆಯೂ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಒಂದು ವೇಳೆ ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿದರೆ, ತಮ್ಮ ನಿಷ್ಠರಲ್ಲಿ ಒಬ್ಬರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದೂ ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

***

ಸಂತೋಷ್‌ ಮತ್ತು ಪಕ್ಷದ ಇತರ ಪದಾಧಿಕಾರಿಗಳು ಅಂಡಮಾನ್‌ಗೆ ಹೋಗಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ

–ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.