ADVERTISEMENT

ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ: ಪುಟ್ಟಪರ್ತಿಗೆ ಭಕ್ತರ ದಂಡು

ಪಿಟಿಐ
Published 8 ನವೆಂಬರ್ 2025, 14:17 IST
Last Updated 8 ನವೆಂಬರ್ 2025, 14:17 IST
ಶತಮಾನೋತ್ಸವಕ್ಕಾಗಿ ಪುಟ್ಟಪರ್ತಿಗೆ ಬಂದಿರುವ ರಷ್ಯಾದ ಭಕ್ತೆ (ಪಿಟಿಐ ಚಿತ್ರ)
ಶತಮಾನೋತ್ಸವಕ್ಕಾಗಿ ಪುಟ್ಟಪರ್ತಿಗೆ ಬಂದಿರುವ ರಷ್ಯಾದ ಭಕ್ತೆ (ಪಿಟಿಐ ಚಿತ್ರ)   

ಪುಟ್ಟಪರ್ತಿ (ಆಂಧ್ರಪ್ರದೇಶ): ಆಧ್ಯಾತ್ಮಿಕ ನಾಯಕ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವವನ್ನು ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ನವೆಂಬರ್ 13ರಿಂದ 24ರವರೆಗೆ ಆಯೋಜಿಸಿದೆ. ನವೆಂಬರ್ 19ರಂದು ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ‌ ಭಾಗವಹಿಸಲಿದ್ದಾರೆ.

2011ರಲ್ಲಿ ಸಾಯಿ ಬಾಬಾ ನಿಧನವಾದ ನಂತರ ಟ್ರಸ್ಟ್‌ ಆಯೋಜಿಸುತ್ತಿರುವ ಅತ್ಯಂತ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶವಿದೇಶಗಳಿಂದ ಜನರು ಆಂಧ್ರಪ್ರದೇಶದ ಚಿತ್ರಾವತಿ ನದಿ ದಂಡೆಯಲ್ಲಿರುವ ಪುಟ್ಟಪರ್ತಿಯ ಪ್ರಶಾಂತಿ ನಿಲಯದಲ್ಲಿ ಸೇರಲು ಪ್ರಾರಂಭಿಸಿದ್ದಾರೆ. ಕೆಲವರು ಆಚರಣೆಗಳಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದರೆ, ಇನ್ನೂ ಕೆಲವರು ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಬಂದಿದ್ದಾರೆ.

ಕಾರ್ಯಕ್ರಮಕ್ಕೆ ಬರುವವರನ್ನು ಸ್ವಾಗತಿಸಲು ವರ್ಣರಂಜಿತ ದೀಪಗಳು, ತಾತ್ಕಾಲಿಕ ಸ್ವಾಗತ ದ್ವಾರಗಳಿಂದ ಪುಟ್ಟಪರ್ತಿ ಅಲಂಕರಿಸಲ್ಪಟ್ಟಿದೆ. ಅಲ್ಲದೆ, ಶತಮಾನೋತ್ಸವದ ಆಚರಣೆಗಾಗಿ ಪುಟ್ಟಪರ್ತಿ ಚಟುವಟಿಕೆಗಳಿಂದ ತುಂಬಿದ್ದು, ಇದಕ್ಕಾಗಿ ಜಗತ್ತಿನ ಸುಮಾರು 140 ದೇಶಗಳಿಂದ ಭಕ್ತರು ಒಟ್ಟುಗೂಡುತ್ತಿದ್ದಾರೆ.

ADVERTISEMENT

ಸ್ವಿಟ್ಜರ್‌ಲೆಂಡ್‌ನಿಂದ ಬಂದಿರುವ ಎಲೆನಾ ಮಾತನಾಡಿ, ‘ಈ ಆಶ್ರಮಕ್ಕೆ ಬಂದಾಗೆಲ್ಲಾ, ನನಗೆ ಮನೆಗೆ ಮರಳಿದ ಅನುಭವ ಆಗುತ್ತದೆ. ಬಾಬಾ ಅವರ ಹುಟ್ಟುಹಬ್ಬಕ್ಕಾಗಿ ನಾನು ಒಂದು ತಿಂಗಳಿನಿಂದ ಇಲ್ಲೆ ಇದ್ದೇನೆ’ ಎಂದು ಹೇಳಿದರು.

ಬಾಬಾ ಭೌತಿಕವಾಗಿ ಇಲ್ಲಿದ್ದ ಸಮಯಕ್ಕೆ ಹೋಲಿಸಿದರೆ ಈಗ ಇಲ್ಲಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಾಗಿದೆ. ಅಂದರೆ ಅವರ ಧ್ಯೇಯವು ಮುಂದುವರೆಯುತ್ತಿದೆ ಮತ್ತು ಅದು ಜನರಿಗೆ ನಂಬಿಕೆ ಆತ್ಮವಿಶ್ವಾಸವನ್ನು ನೀಡುತ್ತಿ‌ದೆ
- ಆರ್‌.ಜೆ. ರತ್ನಾಕರ್, ವ್ಯವಸ್ಥಾಪಕ ಟ್ರಸ್ಟಿ, ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್

ರಷ್ಯಾದಿಂದ ಬಂದಿರುವ ದರಿಯಾ ಮಾತನಾಡಿ, ‘ಪ್ರತಿ ವರ್ಷ ನಾನು ಸತ್ಯಸಾಯಿ ಬಾಬಾ ಅವರ ಆಶ್ರಮಕ್ಕೆ ಭೇಟಿ ನೀಡುತ್ತೇನೆ, ಅವರು ಭೌತಿಕವಾಗಿ ಇದ್ದಾರೋ, ಇಲ್ಲವೊ ಎಂಬುವುದು ಮುಖ್ಯವಲ್ಲ. ಎಲ್ಲವೂ ಇನ್ನೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವ ಕಾರಣಕ್ಕೆ ನಾನು ಇಲ್ಲಿಗೆ ಬರುತ್ತೇನೆ’ ಎಂದು ತಿಳಿಸಿದರು.

ಶತಮಾನೋತ್ಸವ ಆಚರಣೆಯಲ್ಲಿ ದೇಶ–ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸುವ ನಿರೀಕ್ಷೆಯಿರುವುದರಿಂದ, ಉಚಿತ ಆಹಾರ ಮತ್ತು ವಾಸ್ತವ್ಯವನ್ನು ಒದಗಿಸಲು ಬೃಹತ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ತಾತ್ಕಾಲಿಕ ಆಶ್ರಯತಾಣಗಳನ್ನು ನಿರ್ಮಿಸಲಾಗುತ್ತದೆ. ಜೊತೆಗೆ ‘ಸೇವಾದಳ’ ಎಂಬ ಹೆಸರಿನ ಸ್ವಯಂಸೇವಕರ ತಂಡವು ಜನಸಂದಣಿಯ ನಿರ್ವಹಣೆಯಂತಹ ಇತರ ಸೇವೆಗಳನ್ನು ಒದಗಿಸಲು ಸಿದ್ದವಾಗುತ್ತಿದೆ‌.

ಪುಟ್ಟಪರ್ತಿಯ ಪ್ರಶಾಂತಿ ನಿಲಯ ಆಶ್ರಮ (ಪಿಟಿಐ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.