ಛತ್ರಪತಿ ಸಾಂಭಾಜಿ ಮಹಾರಾಜ್ ಹಾಗೂ ವಿ.ಡಿ. ಸಾವರ್ಕರ್
ಎಕ್ಸ್ ಚಿತ್ರ
ಮುಂಬೈ: ವಿ.ಡಿ. ಸಾವರ್ಕರ್ ರಚಿಸಿದ ‘ಆಂದಿ ಮೇ, ಅನಂತ್ ಮೇ’ ದೇಶಭಕ್ತಿಗೆ ಗೀತೆಗೆ ಮಹಾರಾಷ್ಟ್ರ ಸರ್ಕಾರ ಇದೇ ಮೊದಲ ಬಾರಿಗೆ ನೀಡುತ್ತಿರುವ ಛತ್ರಪತಿ ಸಾಂಭಾಜಿ ಮಹಾರಾಜ್ ರಾಜ್ಯ ಪ್ರೇರಣಾ ಗೀತೆ ಪುರಸ್ಕಾರ ಲಭಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರದಾನ ಮಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಪ್ರತಿಷ್ಠಾನದ ಪರವಾಗಿ ಸಾವರ್ಕರ್ ಅವರ ಮರಿಮೊಮ್ಮಗ ರಂಜಿತ್ ಸಾವರ್ಕರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು ₹2 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇದ್ದರು. ಸಾವರ್ಕರ್ ಸ್ಮರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನದ ನಂತರ ಅಮಿತ್ ಶಾ ಮಾತನಾಡಬೇಕಿತ್ತು. ಆದರೆ ಅವರು ಮಾತನಾಡದೆ ತಕ್ಷಣ ದೆಹಲಿಗೆ ದೌಡಾಯಿಸಿದರು.
ವೀರ ಯೋಧ ಹಾಗೂ ಕವಿಯೂ ಆಗಿದ್ದ ಛತ್ರಪತಿ ಸಾಂಭಾಜಿ ಮಹಾರಾಜ್ ಅವರ ನೆನಪಿನಲ್ಲಿ ದೇಶಭಕ್ತಿಯ ಭಾವನೆ ಜನರಲ್ಲಿ ಮೂಡಿಸುವ ಕವಿತೆಗೆ ರಾಜ್ಯ ಸಂಸ್ಕೃತಿ ಸಚಿವಾಲಯ ಪ್ರಶಸ್ತಿ ನೀಡಲು ನಿರ್ಧರಿಸಿತ್ತು.
ಈ ಕುರಿತು ಮಾತನಾಡಿ ಸಂಸ್ಕೃತಿ ಸಚಿವ ಆಶೀಷ್ ಶೆಲಾರ್, ‘ಛತ್ರಪತಿ ಸಾಂಭಾಜಿ ಮಹಾರಾಜರು ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಅವರೊಬ್ಬ ಮಹಾನ್ ಚಿಂತಕ ಹಾಗೂ ಕವಿಯೂ ಆಗಿದ್ದರು. ಹೀಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿತು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.