ಶಾಂತಿಶ್ರೀ ಪಂಡಿತ್–
ಪಿಟಿಐ ಚಿತ್ರ
ಪುಣೆ: ‘ಇಲ್ಲಿನ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯವು ನವದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯಕ್ಕಿಂತಲೂ (ಜೆಎನ್‌ಯು) ಹೆಚ್ಚು ‘ಎಡಪಂಥೀಯ’ ವಾಗಿದೆ. ಆದರೆ, ಯಾವಾಗಲೂ ಅದು ಗೋಚರಿಸುವುದಿಲ್ಲ’ ಎಂದು ಜೆಎನ್‌ಯು ವಿಶ್ವವಿದ್ಯಾಲಯದ ಕುಲಪತಿ ಡಾ. ಶಾಂತಿಶ್ರೀ ಪಂಡಿತ್ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರ ಶಿಕ್ಷಣ ಸೊಸೈಟಿಯು ಗುರುವಾರ ವಿಶ್ವವಿದ್ಯಾಲಯದ ಆವರಣದಲ್ಲಿ ‘ವಾಸುದೇವ ಬಲವಂತ್ ಫಡ್ಕೆ’ ಸ್ಮರಣಾರ್ಥ ಹಮ್ಮಿಕೊಂಡಿದ್ದ ‘ಹೊಸ ಕಾಲಘಟ್ಟದಲ್ಲಿ ಭಾರತೀಯ ಸಮಾಜ– ಅವಕಾಶಗಳು ಹಾಗೂ ಸವಾಲುಗಳು’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಡಪಂಥೀಯ ವಿಚಾರಧಾರೆ’ ಹೊಂದಿರುವ ಜೆಎನ್‌ಯುನಲ್ಲಿ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಲು ಹೇಗೆ ಸಾಧ್ಯವಾಯಿತು? ಎಂಬ ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು, ‘ಜೆಎನ್‌ಯುನಲ್ಲಿ ಕೆಲಸ ಮಾಡುವುದು ಸುಲಭವಲ್ಲ, ಹೆಚ್ಚು ಧೈರ್ಯ ಬೇಕಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಪುಣೆಯ ಫುಲೆ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ ಅನುಭವದಿಂದ, ಈಗಿನ ಜವಾಬ್ದಾರಿಯಿಂದ ಅತ್ಯಂತ ಹೆಚ್ಚು ದಕ್ಷತೆಯಿಂದ ಹೆಚ್ಚು ಕೆಲಸ ಮಾಡಲು ಸಾಧ್ಯವಾಯಿತು’ ಎಂದು ತಿಳಿಸಿದ್ದಾರೆ.
ಮೂರು ವರ್ಷದ ಹಿಂದೆ ಶಾಂತಿಶ್ರೀ ಅವರನ್ನು ಕೇಂದ್ರ ಸರ್ಕಾರವು ಜೆಎನ್‌ಯು ವಿ.ವಿಯ ಮೊದಲ ಮಹಿಳಾ ಕುಲಪತಿಯನ್ನಾಗಿ ನೇಮಿಸಿತ್ತು. ಕುಲಪತಿಯಾಗುವ ಮುನ್ನ ಶಾಂತಿಶ್ರೀ ಅವರು ಫುಲೆ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಹಾಗೂ ಸಾರ್ವಜನಿಕ ಆಡಳಿತ ವಿಷಯದ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.
ಜನರ ಧಾರ್ಮಿಕ ನಂಬಿಕೆ ಅನುಸಾರವಾಗಿ ಮಹಾರಾಷ್ಟ್ರ ಯಾವ ವಿಶ್ವವಿದ್ಯಾಲಯದಲ್ಲಿಯೂ ಏಕೆ ಕೋರ್ಸ್‌ಗಳನ್ನು ಕಲಿಸಲಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಿಖರವಾಗಿ ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ್ದು ಇಲ್ಲ. ಆದರೆ, ಜೆಎನ್‌ಯುನಲ್ಲಿ ಹಿಂದೂ, ಬುದ್ಧ ಹಾಗೂ ಜೈನ ಧರ್ಮದ ಅಧ್ಯಯನ ಕೇಂದ್ರಗಳಿವೆ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.