ನವದೆಹಲಿ: ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪ್ರಸ್ತುತ ವಾಸಿಸುತ್ತಿರುವ ಕೃಷ್ಣ ಮೆನನ್ ಮಾರ್ಗದ 5ನೇ ಬಂಗಲೆಯನ್ನು ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆಡಳಿತ ಮಂಡಳಿಯು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ.
ಮಾಜಿ ಸಿಜೆಐ ಚಂದ್ರಚೂಡ್ ಅವರು ಅನುಮತಿಸಲಾದ ಅವಧಿಯನ್ನು ಮೀರಿ ಅಧಿಕೃತ ನಿವಾಸದಲ್ಲಿ ವಾಸಿಸುತ್ತಿದ್ದಾರೆ ಎಂದು ಆಡಳಿತ ಮಂಡಳಿಯು ತಿಳಿಸಿದೆ. ಅಧಿಕೃತ ಮುಖ್ಯ ನ್ಯಾಯಮೂರ್ತಿ ನಿವಾಸವನ್ನು ತುರ್ತಾಗಿ ಖಾಲಿ ಮಾಡಿಸಿ ನ್ಯಾಯಾಲಯದ ವಸತಿ ನಿರ್ವಹಣೆ ವಿಭಾಗಕ್ಕೆ ಹಿಂದಿರುಗಿಸುವಂತೆ ಪತ್ರದಲ್ಲಿ ಕೋರಲಾಗಿದೆ.
ಸುಪ್ರೀಂ ಕೋರ್ಟ್ ಆಡಳಿತ ಮಂಡಳಿಯು ಜುಲೈ 1ರಂದು ಸಚಿವಾಲಯದ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ‘ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಂದ ಕೃಷ್ಣ ಮೆನನ್ ಮಾರ್ಗದ 5ನೇ ಬಂಗಲೆಯನ್ನು ಯಾವುದೇ ವಿಳಂಬವಿಲ್ಲದೆ ಸ್ವಾಧೀನಪಡಿಸಿಕೊಳ್ಳಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಏಕೆಂದರೆ, ಅವರು ಉಳಿದುಕೊಳ್ಳಲು ನೀಡಲಾದ ಅನುಮತಿಯು 2025ರ ಮೇ31ಕ್ಕೆ ಮುಕ್ತಾಯಗೊಂಡಿದೆ. ಜೊತೆಗೆ 2022ರ ನಿಯಮಗಳ 3ಬಿನಲ್ಲಿ ಅನುಮತಿಸಲಾದ ಆರು ತಿಂಗಳ ಅವಧಿಯು 2025ರ ಮೇ10ಕ್ಕೆ ಮುಕ್ತಾಯಗೊಂಡಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.