ADVERTISEMENT

1991ರ ಕಾಯ್ದೆ ಪರಿಣಾಮಕಾರಿ ಜಾರಿ: ಓವೈಸಿ ಮನವಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 7:57 IST
Last Updated 2 ಜನವರಿ 2025, 7:57 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: 1947ರ ಆಗಸ್ಟ್ 15ರಂದು ಇದ್ದಂತೆಯೇ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳುವ 1991ರ ಪೂಜಾ ಸ್ಥಳಗಳ ಕಾನೂನನ್ನು ಜಾರಿಗೊಳಿಸುವಂತೆ ಕೋರಿ ಎಐಎಂಐಎಂ ವರಿಷ್ಠ ಅಸಾದುದ್ದೀನ್‌ ಓವೈಸಿ ಸಲ್ಲಿಸಿರುವ ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಈ ಸಂಬಂಧ ಸಲ್ಲಿಸಲಾಗಿರುವ ಪೆಂಡಿಂಗ್ ಅರ್ಜಿಗಳ ಜೊತೆಯೇ ನಿಮ್ಮ ಅರ್ಜಿಯನ್ನೂ ಫೆಬ್ರುವರಿ 17ರಂದು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನು ಒಳಗೊಂಡ ಪೀಠ ಹೇಳಿದೆ.

ADVERTISEMENT

ವಕೀಲ ಫಜೈಲ್ ಅಹಮ್ಮದ್ ಅಯ್ಯೂಬಿ ಮೂಲಕ ಡಿಸೆಂಬರ್ 17ರಂದು ಓವೈಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

1991ರ ಪೂಜಾ ಸ್ಥಳಗಳ ಕಾಯ್ದೆ ಸಂಬಂದ ಸಲ್ಲಿಸಲಾಗಿರುವ ಹಲವು ಅರ್ಜಿಗಳು ಕುರಿತು ಡಿಸೆಂಬರ್ 12ರಂದು ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ಪೀಠವು, ಮಸೀದಿ ಅಥವಾ ದರ್ಗಾ ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ವಶಕ್ಕೆ ನೀಡಬೇಕೆಂದು ಕೋರಲಾದ ಅರ್ಜಿಗಳ ಕುರಿತಂತೆ ಕೆಳ ನ್ಯಾಯಾಲಯಗಳು ಯಾವುದೇ ಆದೇಶ ನೀಡದಂತೆ ನಿರ್ಬಂಧಿಸಿ ಆದೇಶ ನೀಡಿತ್ತು.

ಈ ಸಂಬಂಧ ವಕೀಲರಾದ ಅಶ್ವಿನಿ ಉಪಾಧ್ಯಾಯ ಸೇರಿದಂತೆ 6 ಮಂದಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

1991ರ ಧಾರ್ಮಿಕ ಸ್ಥಳಗಳ ಪೂಜಾ ಕಾಯ್ದೆಯು ಯಾವುದೇ ಪೂಜಾ ಸ್ಥಳದ ಪರಿವರ್ತನೆಯನ್ನು ನಿಷೇಧಿಸುತ್ತದೆ. 1947ರ ಆಗಸ್ಟ್ 15ರಲ್ಲಿ ಅಸ್ತಿತ್ವದಲ್ಲಿದ್ದ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಕಾಯ್ದೆಯ ಪರಿಣಾಮಕಾರಿ ಜಾರಿಗೆ ಓವೈಸಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.