ADVERTISEMENT

ಜ್ಞಾನವಾಪಿ| ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು

ಪಿಟಿಐ
Published 18 ಮೇ 2023, 11:29 IST
Last Updated 18 ಮೇ 2023, 11:29 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ವಾರಾಣಸಿಯ ಜ್ಞಾನವಾ‍ಪಿ ಮಸೀದಿ ಸಂಕೀರ್ಣದಲ್ಲಿ ದೊರೆತಿದೆ ಎಂದು ಹೇಳಲಾಗಿರುವ ಶಿವಲಿಂಗವನ್ನು ಕಾರ್ಬನ್‌ ಡೇಟಿಂಗ್‌ ಪರೀಕ್ಷೆಗೆ ಒಳಪಡಿಸಲು ಹಾಗೂ ಈ ಕುರಿತು ವೈಜ್ಞಾನಿಕ ಸರ್ವೆ ನಡೆಸಲು ಅನುಮತಿ ನೀಡಿರುವ ಅಲಹಾಬಾದ್‌ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಗುರುವಾರ ಒಪ್ಪಿಗೆ ಸೂಚಿಸಿದೆ.

ಜ್ಞಾನವಾಪಿ ಮಸೀದಿಯ ಆಡಳಿತ ಮಂಡಳಿ ಸಲ್ಲಿಸಿರುವ ಮೇಲ್ಮನವಿಯನ್ನು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಹಾಗೂ ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಹೇಳಿದೆ.

ಮಸೀದಿಯ ಆಡಳಿತ ಮಂಡಳಿ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಹುಜೇಫಾ ಅಹ್ಮದಿ, ‘ಮೇಲ್ಮನವಿಯ ವಿಚಾರಣೆ ಬಾಕಿ ಇರುವಾಗಲೇ ಅಲಹಾಬಾದ್‌ ಹೈಕೋರ್ಟ್‌ ವೈಜ್ಞಾನಿಕ ಸರ್ವೆಗೆ ಆದೇಶಿಸಿದೆ’ ಎಂದು ಹೇಳಿದರು.

ADVERTISEMENT

ಶಿವಲಿಂಗದ ಕಾಲ ನಿರ್ಣಯಕ್ಕಾಗಿ ಅದನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸುವಂತೆ ಹೈಕೋರ್ಟ್‌ ಇದೇ 12ರಂದು ಆದೇಶ ನೀಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.