ADVERTISEMENT

ನೈಜ ಶಿವಸೇನಾ: ಶಿಂದೆ ಬಣಕ್ಕೆ ಮೇಲುಗೈ

ಉದ್ಧವ್‌ ಬಣದ ಅರ್ಜಿ ತಿರಸ್ಕರಿಸಿದ ಸಂವಿಧಾನ ಪೀಠ: ಶಿಂದೆ ಬಣದ ಅಹವಾಲು ಆಲಿಸಲು ಚುನಾವಣಾ ಆಯೋಗಕ್ಕೆ ಸಮ್ಮತಿ

ಪಿಟಿಐ
Published 27 ಸೆಪ್ಟೆಂಬರ್ 2022, 16:20 IST
Last Updated 27 ಸೆಪ್ಟೆಂಬರ್ 2022, 16:20 IST
ಶಿವಸೇನಾ
ಶಿವಸೇನಾ   

ನವದೆಹಲಿ:ತಮ್ಮ ಬಣವನ್ನು ನೈಜ ಶಿವಸೇನಾ ಎಂದು ಮಾನ್ಯ ಮಾಡಿ, ಬಿಲ್ಲು–ಬಾಣ ಒಳಗೊಂಡ ಪಕ್ಷದ ಚಿಹ್ನೆಯನ್ನು ತಮಗೇ ನೀಡಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಪುರಸ್ಕರಿಸಿದೆ. ಈ ಕುರಿತ ಪ್ರಕ್ರಿಯೆ ಆರಂಭಿಸುವಂತೆ ಚುನಾವಣಾ ಆಯೋಗಕ್ಕೆಮಂಗಳವಾರ ಸೂಚಿಸಿದೆ.

ಶಿಂದೆ ಬಣವನ್ನು ನಿಜವಾದ ಶಿವಸೇನಾ ಎಂದು ಗುರುತಿಸುವ ಚುನಾವಣಾ ಆಯೋಗದ ಪ್ರಕ್ರಿಯೆಗೆ ತಡೆಯೊಡ್ಡಬೇಕೆಂದು ಕೋರಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವುತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ಪೀಠವು ‘ಚುನಾವಣಾ ಆಯೋಗದ ಪ್ರಕ್ರಿಯೆಗೆ ತಡೆ ನೀಡಲು ಸಾಧ್ಯವಿಲ್ಲ. ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟಿನ ಕುರಿತು ಚುನಾವಣಾ ಆಯೋಗವೇ ವಿಚಾರಣೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ’ ಎಂದು ಹೇಳಿದೆ.

ADVERTISEMENT

ಠಾಕ್ರೆ ಬಣದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಕಪಿಲ್‌ ಸಿಬಲ್‌,‘ಶಿಂದೆ ಸೇರಿದಂತೆ ಪಕ್ಷದ ಇತರ ಶಾಸಕರು ಹಿಂದಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು. ಹೀಗಾಗಿ ಅವರನ್ನು ಪಕ್ಷದಿಂದ ಅನರ್ಹಗೊಳಿಸುವಂತೆ ಈ ವರ್ಷದ ಜೂನ್‌ನಲ್ಲಿ ನೋಟಿಸ್‌ ನೀಡಲಾಗಿದೆ. ಈ ಸಂಬಂಧದ ಅರ್ಜಿಯ ವಿಚಾರಣೆ ಇನ್ನೂ ಬಾಕಿ ಇದೆ. ಶಿಂದೆ ಈಗ ಶಿವಸೇನಾದ ಭಾಗವಾಗಿಲ್ಲ. ಪಕ್ಷದ ಸದಸ್ಯತ್ವವನ್ನೂ ಹೊಂದಿಲ್ಲ. ಹೀಗಿರುವಾಗತಮ್ಮ ಬಣವನ್ನು ನೈಜ ಶಿವಸೇನಾ ಎಂದು ಮಾನ್ಯ ಮಾಡಬೇಕು. ಬಿಲ್ಲು–ಬಾಣ ಒಳಗೊಂಡ ಪಕ್ಷದ ಚಿಹ್ನೆಯನ್ನು ತಮಗೇ ನೀಡಬೇಕೆಂದು ಕೋರಿ ಅವರು ಸಲ್ಲಿಸಿರುವ ಅರ್ಜಿಯನ್ನು ಚುನಾವಣಾ ಆಯೋಗ ಹೇಗೆ ವಿಚಾರಣೆ ನಡೆಸಲಿದೆ’ ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಚುನಾವಣಾ ಆಯೋಗವು ಯಾವ ಬಣ ‘ನೈಜ ಶಿವಸೇನಾ’ ಎಂಬುದನ್ನಷ್ಟೇ ನಿರ್ಧರಿಸಲಿದೆ. ಹೀಗಾಗಿ ಶಿಂದೆ ಬಣದ ಅರ್ಜಿಯ ವಿಚಾರಣೆ ನಡೆಸಲು ಆಯೋಗಕ್ಕೆ ಅನುಮತಿ ನೀಡಬೇಕು’ ಎಂದು ಹೇಳಿದರು.

ಶಿಂದೆ ಬಣದ ಪರ ವಕೀಲ ಎನ್‌.ಕೆ.ಕೌಲ್‌, ‘ಚುನಾವಣಾ ಚಿಹ್ನೆಯು ಶಾಸಕನೊಬ್ಬನ ಸ್ವತ್ತಲ್ಲ. ಅದು ಯಾರ ಬಣಕ್ಕೆ ಸೇರಿದ್ದು ಎಂಬುದನ್ನು ನಿರ್ಧರಿಸಬೇಕಿರುವುದು ಚುನಾವಣಾ ಆಯೋಗ. ಈ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಆಯೋಗಕ್ಕೆ ನಿರ್ಬಂಧ ವಿಧಿಸಬಾರದು’ ಎಂದು ಮನವಿ ಮಾಡಿದರು.

ಚುನಾವಣಾ ಆಯೋಗದ ಪರ ವಕೀಲ ಅರವಿಂದ್‌ ದಾತರ್‌, ‘ಪಕ್ಷದಲ್ಲಿ ಯಾರಿಗೆ ಬಹುಮತವಿದೆ ಎಂಬುದನ್ನು ನಿರ್ಧರಿಸಲು ಚುನಾವಣಾ ಆಯೋಗವು ಸ್ವತಂತ್ರವಾಗಿದೆ’ ಎಂದರು.

‘ಲೋಕಸಭೆ, ವಿಧಾನಸಭೆಯಲ್ಲಿ ನಮಗೆ ಬಹುಮತವಿದೆ’

‘ಸುಪ್ರೀಂ ಕೋರ್ಟ್‌ನ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ನಮ್ಮ ಬಣ ಬಹುಮತ ಹೊಂದಿದೆ. ಚುನಾವಣಾ ಆಯೋಗವು ಸ್ವತಂತ್ರ ಸಾಂವಿಧಾನಿಕ ಸಂಸ್ಥೆ. ಆಯೋಗ ಹಾಗೂ ನ್ಯಾಯಾಂಗದ ಮೇಲೆ ನಮಗೆ ನಂಬಿಕೆ ಇದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.

‘ನ್ಯಾಯಾಂಗದ ಮೇಲೆ ನಮಗೆ ಪೂರ್ಣ ಭರವಸೆ ಇದೆ. ಈಗಾಗಲೇ ಚುನಾವಣಾ ಆಯೋಗಕ್ಕೆ ಹಲವು ದಾಖಲೆಗಳನ್ನು ಸಲ್ಲಿಸಿದ್ದೇವೆ. ಅಗತ್ಯವಿರುವ ಇನ್ನಷ್ಟು ದಾಖಲೆಗಳನ್ನೂ ಒದಗಿಸುತ್ತೇವೆ’ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಬೆಂಬಲಿಗ, ಮಾಜಿ ಸಂಸದ ಚಂದ್ರಕಾಂತ್‌ ಖೈರೆ ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ನಮಗೆ ಸಂಖ್ಯಾಬಲವಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೂ ವಿಶ್ವಾಸವಿದೆ.

–ಏಕನಾಥ ಶಿಂದೆ, ಮಹಾರಾಷ್ಟ್ರ ಮುಖ್ಯಮಂತ್ರಿ.

ನಿರ್ದಿಷ್ಟ ಕಾರ್ಯವಿಧಾನದ ಅನ್ವಯ ಇಡೀ ಪ್ರಕ್ರಿಯೆ ನಡೆಯಲಿದೆ. ಅದು ಪಾರದರ್ಶಕವಾಗಿರಲಿದೆ. ಅಗತ್ಯವಿದ್ದರೆ ಬಹುಮತದ ನಿಯಮ ಅನ್ವಯಿಸುತ್ತೇವೆ.

–ರಾಜೀವ್‌ ಕುಮಾರ್‌, ಮುಖ್ಯ ಚುನಾವಣಾ ಆಯುಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.