ADVERTISEMENT

ಟಿ.ಬಿ. ಜಯಚಂದ್ರ ಅರ್ಜಿ ಪರಿಗಣಿಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 19:30 IST
Last Updated 1 ಡಿಸೆಂಬರ್ 2022, 19:30 IST
ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ   

ನವದೆಹಲಿ: ಕರ್ನಾಟಕದ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ತಮ್ಮ ಚುನಾವಣಾ ತಕರಾರು ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆಗೆ ಪರಿಗಣಿಸಿದೆ.

ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಮತ್ತು ಅಭಯ್‌ ಎಸ್‌. ಓಕಾ ಅವರಿದ್ದ ಪೀಠವು,2020ರಲ್ಲಿ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಸಿ.ಎಂ. ರಾಜೇಶ್‌ಗೌಡ ಜತೆಗೆ ಇತರ ಅಭ್ಯರ್ಥಿಗಳನ್ನೂ ಪ್ರತಿವಾದಿಗಳನ್ನಾಗಿಸಬೇಕೆಂದೂ ಜಯಚಂದ್ರ ಅವರು ಹೈಕೋರ್ಟ್‌ನಲ್ಲಿ ಮಾಡಿದ್ದ ಮನವಿಯನ್ನೂ ಪುರಸ್ಕರಿಸಿದೆ.

ರಾಜೇಶ್‌ಗೌಡ ಅವರು ಚುನಾವಣಾ ಅಕ್ರಮಗಳನ್ನು ಎಸಗಿರುವುದರಿಂದ ಅವರ ಆಯ್ಕೆ ರದ್ದುಪಡಿಸಿ, ಎರಡನೇ ಸ್ಥಾನ ಪಡೆದ ತಮ್ಮನ್ನು ವಿಜೇತರಾಗಿ ಘೋಷಿಸುವಂತೆ ಜಯಚಂದ್ರ ಹೈಕೋರ್ಟ್‌ ಕೋರ್ಟ್‌ ಮೆಟ್ಟಿಲೇರಿದ್ದರು.2021ರ ಜೂನ್‌ 18ರಂದು ಅವರ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿ ಆದೇಶಿಸಿತ್ತು. ಈ ಆದೇಶದ ಸಿಂಧುತ್ವ ಪ್ರಶ್ನಿಸಿ,ಚುನಾವಣಾ ದುಷ್ಕೃತ್ಯಗಳ ಬಗ್ಗೆ ಜಯಚಂದ್ರ ಅವರು ತಮ್ಮ ಅರ್ಜಿಯಲ್ಲಿ ದನಿ ಎತ್ತಿದ್ದಾರೆ.

ADVERTISEMENT

ಜಯಚಂದ್ರ ಪರವಾಗಿ ವಕೀಲ ಕೆ.ವಿ. ಮುತ್ತು ಕುಮಾರ್‌ ಮತ್ತು ರಾಜೇಶ್‌ಗೌಡ ಪರ ಹಿರಿಯ ವಕೀಲ ಎಸ್‌.ಎನ್‌. ಭಟ್‌ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.