ADVERTISEMENT

ಕಾಶ್ಮೀರದಲ್ಲಿ 4ಜಿ ಮರುಸ್ಥಾಪನೆಗೆ ನಿರ್ದಿಷ್ಟ ನಿಲುವು ತೆಗೆದುಕೊಳ್ಳಿ : ಕೇಂದ್ರ

ಕೇಂದ್ರ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ‘ಸುಪ್ರೀಂ’ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 15:41 IST
Last Updated 7 ಆಗಸ್ಟ್ 2020, 15:41 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ 4ಜಿ ಅಂತರ್ಜಾಲ ಸೇವೆ ಮರುಸ್ಥಾಪನೆ ಕುರಿತು ನಿರ್ದಿಷ್ಟ ನಿಲುವು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ.

‘ಜಮ್ಮು ಮತ್ತು ಕಾಶ್ಮೀರದ ಕೆಲ ಪ್ರದೇಶಗಳಿಗೆ ಹೈ ಸ್ಪೀಡ್‌ ಅಂತರ್ಜಾಲ ಸೇವೆ ಲಭ್ಯವಾಗುವಂತೆ ಮಾಡುವುದಕ್ಕೆ ಸಾಧ್ಯವಿದೆಯೇ’ ಎಂದು ನ್ಯಾಯಮೂರ್ತಿ ಎನ್‌.ವಿ.ರಮಣ ಅವರಿದ್ದ ಪೀಠ ಪ್ರಶ್ನಿಸಿತು. ಪೀಠದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರ, ‘ಕೇಂದ್ರಾಡಳಿತ ಪ್ರದೇಶದ ನೂತನ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಮಾಜಿ ಕೇಂದ್ರ ಸಚಿವ ಮನೋಜ್‌ ಸಿನ್ಹಾ ಅವರನ್ನು ನೇಮಿಸಲಾಗಿದೆ. 4ಜಿ ಸೇವೆ ಮರುಸ್ಥಾಪನೆ ಕುರಿತು ಪ್ರತಿಕ್ರಿಯೆ ನೀಡಲು ಸಮಯಾವಕಾಶ ಬೇಕು’ ಎಂದು ಕೇಂದ್ರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾಮನವಿ ಸಲ್ಲಿಸಿದರು.

ಜೊತೆಗೆ 4ಜಿ ಅಂತರ್ಜಾಲ ಸೇವೆ ಕುರಿತು ತೆಗೆದುಕೊಂಡ ನಿರ್ಧಾರ ಪುನರ್‌ಪರಿಶೀಲಿಸಲು ರಚಿಸಿದ ವಿಶೇಷ ಸಮಿತಿ ಬದಲಾವಣೆಯಾಗಿಲ್ಲ ಎಂದು ಇದೇ ವೇಳೆ ಕೇಂದ್ರವು ಪೀಠದ ಗಮನಕ್ಕೆ ತಂದಿತು. ಈ ಕುರಿತು ಸರ್ಕಾರೇತರ ಸಂಸ್ಥೆ(ಎನ್‌ಜಿಒ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠವು ಮಂಗಳವಾರಕ್ಕೆ ಮುಂದೂಡಿತು.

ADVERTISEMENT

ನ್ಯಾಯಾಂಗ ನಿಂದನೆ ಅರ್ಜಿ: 4ಜಿ ಅಂತರ್ಜಾಲ ಸೇವೆ ಮರುಸ್ಥಾಪನೆಗೆ ನಿರ್ಧಾರ ಕೈಗೊಳ್ಳಲು ವಿಶೇಷ ಸಮಿತಿ ರಚಿಸಬೇಕು ಎಂದು ಮೇ 11ರಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ ಸರ್ಕಾರವು ಸಮಿತಿ ರಚಿಸಿಲ್ಲ ಎಂದು ಆರೋಪಿಸಿ ಎನ್‌ಜಿಒ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಸರ್ಕಾರ ಪ್ರತಿಕ್ರಿಯೆ ನೀಡಲೂ ವಿಳಂಬ ಮಾಡುತ್ತಿದೆ ಎಂದು ಎನ್‌ಜಿಒ ಪರ ವಕೀಲರು ವಿಚಾರಣೆ ವೇಳೆ ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ‘ಇಷ್ಟು ಸಮಯ ಕಾದಿದ್ದೀರಿ, ಇನ್ನೂ ಸ್ವಲ್ಪ ದಿನ ಕಾಯಿರಿ. ಸರ್ಕಾರದ ಪ್ರತಿಕ್ರಿಯೆ ಪರಿಶೀಲಿಸಿ, ನ್ಯಾಯಾಂಗ ನಿಂದನೆ ಆಗಿದೆಯೇ ಎನ್ನುವುದನ್ನು ನೋಡೋಣ’ ಎಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.