
ನವದೆಹಲಿ: ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಅವರ ಮೇಲೆ ನ್ಯಾಯಾಲಯದ ಕಲಾಪ ನಡೆಸುತ್ತಿದ್ದಾಗಲೇ ಶೂ ಎಸೆಯಲು ಯತ್ನಿಸಿದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ‘ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಿರಲು ಸೂಕ್ತ ಸಲಹೆಗಳನ್ನು ನೀಡುವಂತೆ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್‌ಗೆ (ಎಸ್‌ಸಿಬಿಎ) ಸೂಚಿಸಿದೆ.
ಇಂತಹ ಘಟನೆಗಳನ್ನು ವರದಿ ಮಾಡುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರಮಾಣಿತ ಕಾರ್ಯಚರಣೆ ವಿಧಾನವೊಂದನ್ನು (ಎಸ್‌ಒಪಿ) ರೂಪಿಸಬೇಕು ಎಂಬ ಸಲಹೆಯನ್ನೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರು ಪೀಠವು ಮುಂದಿಟ್ಟಿದೆ.
ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಲು ಸಲಹೆಗಳನ್ನು ಸಲ್ಲಿಸುವಂತೆ ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಎಸ್‌ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಅವರಿಗೆ ನ್ಯಾಯಪೀಠ ಸೂಚಿಸಿದೆ. ‘ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕೈಗೊಳ್ಳಬೇಕಿರುವ ಕ್ರಮಗಳು ಮತ್ತು ಶಿಷ್ಟಾಚಾರಗಳ ಬಗ್ಗೆ ಜಂಟಿ ವರದಿ ಸಲ್ಲಿಸುವುದಾಗಿ’ ತುಷಾರ್ ಮಹ್ತಾ ಮತ್ತು ವಿಕಾಸ್ ಸಿಂಗ್ ಪೀಠದ ಗಮನಕ್ಕೆ ತಂದರು.
ಅಕ್ಟೋಬರ್ 6ರಂದು ವಕೀಲ ರಾಕೇಶ್ ಕಿಶೋರ್, ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ಕೋರ್ಟ್ ರೂಂನಲ್ಲಿ ಶೂ ಎಸೆಯಲು ಯತ್ನಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು, 71 ವರ್ಷದ ವಕೀಲ ರಾಕೇಶ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿಕೊಳ್ಳಲು ಇಷ್ಟ ಇಲ್ಲದಿರುವುದನ್ನು ವ್ಯಕ್ತಪಡಿಸಿತು. ಇಡೀ ದೇಶಕ್ಕೆ ಅನ್ವಯವಾಗುವಂತೆ, ಕೋರ್ಟ್‌ಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲು ಸಲಹೆಗಳನ್ನು ಸಲ್ಲಿಸುವಂತೆ ಎಸ್‌ಸಿಬಿಎಗೆ ಸೂಚಿಸಿತು.
ವಕೀಲ ರಾಕೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಸಿಬಿಎ ಆಗ್ರಹಿಸಿತ್ತು. ಶೂ ಎಸೆದ ಘಟನೆ ಬೆನ್ನಲ್ಲೇ, ರಾಕೇಶ್ ಅವರ ಸನ್ನದನ್ನು ಭಾರತೀಯ ಬಾರ್ ಕೌನ್ಸಿಲ್ (ಬಿಸಿಐ) ಅಮಾನತು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.