ADVERTISEMENT

ಜನಸಮೂಹ ನಡೆಸುವ ಹತ್ಯೆ ತಡೆಗೆ ವಿಶೇಷ ಕಾನೂನು ರೂಪಿಸಿ: ಸುಪ್ರೀಂ ಕೋರ್ಟ್‌

ಪಿಟಿಐ
Published 17 ಜುಲೈ 2018, 17:14 IST
Last Updated 17 ಜುಲೈ 2018, 17:14 IST
   

ನವದೆಹಲಿ : ಜನರು ಗುಂಪು ಸೇರಿ ಅಮಾಯಕರಿಗೆ ಸಾಯ ಬಡಿಯುವ ಹೀನ ಕೃತ್ಯಗಳನ್ನು ತಡೆಯಲು ಹೊಸ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಸಂಸತ್ತನ್ನು ಕೇಳಿಕೊಂಡಿದೆ.

ಇಂತಹ ಹೀನ ಕೃತ್ಯಗಳು ಮುಂದೊಂದು ದಿನ ಹೊಸ ಸಂಪ್ರದಾಯ ಹುಟ್ಟು ಹಾಕುವ ಅಪಾಯವಿದೆ. ಅದಕ್ಕೆ ಅವಕಾಶ ಮಾಡಿ ಕೊಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಮೂವರು ಸದಸ್ಯರ ಪೀಠ ಹೇಳಿದೆ.

ದೇಶದಲ್ಲಿ ಅಮಾಯಕರ ಮೇಲೆ ಹೆಚ್ಚುತ್ತಿರುವ ಹಲ್ಲೆ ಮತ್ತು ಹತ್ಯೆಯಂತಹ ಅಮಾನವೀಯ ಘಟನೆಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠ ಸ್ಪಷ್ಟವಾಗಿ ಹೇಳಿದೆ.

ADVERTISEMENT

ದೇಶದಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳಿಗೆ ಕಡಿವಾಣ ಹಾಕುವಂತೆ ಕೋರಿ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಮತ್ತು ಸಾಮಾಜಿಕ ಹೋರಾಟಗಾರ ತೆಹಸೀನ್‌ ಪೂನಾವಾಲಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮುಂದಿನ ವಿಚಾರಣೆಯನ್ನು ಆಗಸ್ಟ್‌ 28ಕ್ಕೆ ನಿಗದಿ ಮಾಡಲಾಗಿದೆ.
**

‘ಸರ್ಕಾರಕ್ಕೆ ಕೋರ್ಟ್ ಕಾಯದು’
ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಕಾನೂನುಗಳಿದ್ದರೆ ಅವುಗಳಿಗೆ ಸರ್ಕಾರ ತಿದ್ದುಪಡಿ ತರುವವರೆಗೆ ಅಥವಾ ಅವುಗಳನ್ನು ರದ್ದುಪಡಿಸುವವರೆಗೆ ನ್ಯಾಯಾಲಯ ಕಾಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸಮ್ಮತಿಯ ಸಲಿಂಗ ಲೈಂಗಿಕತೆಯನ್ನು ಅಪರಾಧಮುಕ್ತಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ ಅನ್ನು ರದ್ದುಪಡಿಸಬೇಕು ಎಂದು ಈ ಅರ್ಜಿಗಳಲ್ಲಿ ವಿನಂತಿಸಲಾಗಿದೆ.

ಅಕ್ಟೋಬರ್‌ 2ರೊಳಗೆ ತೀರ್ಪು:ಸಮ್ಮತಿಯ ಸಲಿಂಗ ಲೈಂಗಿಕತೆಯನ್ನು ಅಪರಾಧಮುಕ್ತಗೊಳಿಸಬೇಕು ಎಂಬ ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ. ಇದೇ 10ರಂದು ಅರ್ಜಿಗಳ ವಿಚಾರಣೆ ಆರಂಭಗೊಂಡಿತ್ತು. 20ರೊಳಗೆ ಲಿಖಿತ ಹೇಳಿಕೆ ದಾಖಲಿಸುವಂತೆ ವಾದಿ–ಪ್ರತಿವಾದಿಗಳಿಗೆ ಸೂಚಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಅಕ್ಟೋಬರ್‌ 2ರಂದು ನಿವೃತ್ತರಾಗಲಿದ್ದಾರೆ. ಹಾಗಾಗಿ ಅದಕ್ಕೆ ಮೊದಲೇ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ.
*
ನಿರ್ದೇಶನಗಳು
* ಗೋಸಂರಕ್ಷಣೆ ಹೆಸರಿನಲ್ಲಿ ಮತ್ತು ಸುಳ್ಳು ಸುದ್ದಿಗಳನ್ನು ನಂಬಿ ಜನರು ನಡೆಸುತ್ತಿರುವ ಹಿಂಸಾ ಕೃತ್ಯಗಳನ್ನು ತಡೆಯಲು ಪೀಠ ಕೆಲವು ನಿರ್ದೇಶನ ನೀಡಿದೆ.

* ಅಮಾಯಕರ ಹತ್ಯೆ ತಡೆಗಟ್ಟಲು ಕೋರ್ಟ್‌ ನೀಡಿರುವ ನಿರ್ದೇಶನಗಳನ್ನುಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸಬೇಕು

* ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯಗಳ ಹೊಣೆ. ಈ ರೀತಿಯ ಹಿಂಸಾಕೃತ್ಯಗಳು ನಡೆದಾಗ ನಿರ್ಲಕ್ಷ್ಯ ತೋರಬಾರದು

* ನಾಗರಿಕರು ಕಾನೂನು ಕೈಗೆ ತೆಗೆದುಕೊಂಡು ತಾವೇ ಕಾನೂನು ರಕ್ಷಕರಂತೆ ವರ್ತಿಸಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.