ADVERTISEMENT

ಮಿಶ್ರಾ ಜಾಮೀನು ರದ್ದತಿ ಶಿಫಾರಸು: ನಿಲುವು ಕೇಳಿದ ‘ಸುಪ್ರೀಂ’

ಪ್ರತಿಕ್ರಿಯಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 17:05 IST
Last Updated 30 ಮಾರ್ಚ್ 2022, 17:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರದಪ್ರಮುಖ ಆರೋಪಿ ಆಶಿಶ್‌ ಮಿಶ್ರಾಗೆ ನೀಡಿರುವ ಜಾಮೀನು ರದ್ದುಪಡಿಸುವಂತೆ ಎಸ್‌ಐಟಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದ ನಿವೃತ್ತ ನ್ಯಾಯಮೂರ್ತಿ ಮಾಡಿರುವ ಶಿಫಾರಸಿನ ಕುರಿತು ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಬುಧವಾರ ಸೂಚಿಸಿದೆ.

ಎಸ್‌ಐಟಿ ಮುಖ್ಯಸ್ಥ ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಅವರು ಮಿಶ್ರಾಗೆ ನೀಡಿರುವ ಜಾಮೀನು ಆದೇಶ ರದ್ದತಿಗೆ ಶಿಫಾರಸು ಮಾಡಿದ್ದಾರೆ ಎಂದು ನ್ಯಾಯಪೀಠ ಹೇಳಿತು. ಜೈನ್ ಅವರನ್ನು ಕೋರ್ಟ್ ನೇಮಕ ಮಾಡಿತ್ತು.

ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು, ಜಾಮೀನು ರದ್ದತಿ ಕುರಿತು ಉತ್ತರ ಪ್ರದೇಶ ಸರ್ಕಾರದ ನಿಲುವು ಏನು ಎಂದು ಪ್ರಶ್ನಿಸಿತು. ರಾಜ್ಯ ಸರ್ಕಾರದ ಪರವಾಗಿ ವಕೀಲ ಮಹೇಶ್ ಜೇಠ್ಮಲಾನಿ ಅವರು ಹಾಜರಾಗಿದ್ದರು.

ADVERTISEMENT

ಈ ಕುರಿತು ಉತ್ತರ ಪ್ರದೇಶದಗೃಹ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಅವರಿಗೆ ಎಸ್‌ಐಟಿ ಎರಡು ಪತ್ರಗಳನ್ನು ಬರೆದಿದೆ ಎಂದು ಪೀಠ ಹೇಳಿತು. ಆದರೆ ಈ ಪತ್ರಗಳ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದ ಜೇಠ್ಮಲಾನಿ, ಉತ್ತರಿಸಲು ಸಮಯ ಬೇಕು ಎಂದು ಕೋರಿದರು. ಸ್ವಲ್ಪ ಸಮಯದ ಬಳಿಕ ಉತ್ತರಿಸಿದ ಜೇಠ್ಮಲಾನಿ, ಎಸ್‌ಐಟಿಯಿಂದ ಯಾವುದೇ ಪತ್ರ ಬಂದಿಲ್ಲ ಎಂಬುದಾಗಿ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದರು ಎಂದು ಕೋರ್ಟ್‌ಗೆ ತಿಳಿಸಿದರು.

ನ್ಯಾಯಮೂರ್ತಿಗಳ ಪತ್ರ ಹಾಗೂ ಎಸ್‌ಐಟಿ ವರದಿಯನ್ನು ರಾಜ್ಯ ಸರ್ಕಾರ, ಸಂತ್ರಸ್ತರು ಸೇರಿದಂತೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರಿಗೂ ಒದಗಿಸಬೇಕು ಎಂದು ಪೀಠ ನಿರ್ದೇಶನ ನೀಡಿತು.ಮುಂದಿನ ವಿಚಾರಣೆಯನ್ನು ಏಪ್ರಿಲ್ 4ಕ್ಕೆ ಮುಂದೂಡಿಲಾಯಿತು.

ಮಿಶ್ರಾ ಜಾಮೀನು ತೀರ್ಪು ಪ್ರಶ್ನಿಸುವ ವಿಚಾರವು ಪರಿಶೀಲನೆಯಲ್ಲಿದೆ ಎಂಬುದಾಗಿ ಉತ್ತರ ಪ್ರದೇಶ ಸರ್ಕಾರವು ಇತ್ತೀಚೆಗೆ ಕೋರ್ಟ್‌ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.