ADVERTISEMENT

ಸುದರ್ಶನ ಟಿ.ವಿ ಪ್ರಕರಣ: ಜಕಾತ್‌ ಫೌಂಡೇಷನ್‌ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ನಾಗರಿಕ ಸೇವೆಗಳ ಪರೀಕ್ಷೆಗಾಗಿ ಮುಸ್ಲಿಂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆ

ಪಿಟಿಐ
Published 18 ಸೆಪ್ಟೆಂಬರ್ 2020, 11:17 IST
Last Updated 18 ಸೆಪ್ಟೆಂಬರ್ 2020, 11:17 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಸುದರ್ಶನ ವಾಹಿನಿಯ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡಲು ಇಚ್ಛಿಸಿದೆಯೇ ಎಂದು ಸುಪ್ರೀಂ ಕೋರ್ಟ್ ಜಕಾತ್‌ ಫೌಂಡೇಷನ್‌ಗೆ ಕೇಳಿದೆ.

‘ಕೆಲ ವಿದೇಶಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಸಂಸ್ಥೆಗಳಿಂದ ಜಕಾತ್‌ ಫೌಂಡೇಷನ್‌ಗೆ ಹಣಕಾಸಿನ ನೆರವು ಲಭಿಸುತ್ತಿರುವುದಾಗಿ ಸುದರ್ಶನ ಸುದ್ದಿ ವಾಹಿನಿ ಆರೋಪಿಸಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಬಯಸುವಿರೇ’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಜಕಾತ್‌ ಫೌಂಡೇಷನ್‌ಗೆ ಕೇಳಿದೆ.

ಸ್ವಯಂ ಸೇವಾ ಸಂಸ್ಥೆಯಾಗಿರುವ ಜಕಾತ್‌ ಫೌಂಡೇಷನ್‌, ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯಲು ಇಚ್ಛಿಸುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದೆ.

ADVERTISEMENT

‘ಸುದರ್ಶನ ಟಿವಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ನಿಮ್ಮ ಕಕ್ಷಿದಾರರ ವಿರುದ್ಧ ವಿದೇಶಿ ಹಣ ಹೂಡಿಕೆಯ ಆರೋಪ ಮಾಡಲಾಗಿದೆ. ಈ ಬಗ್ಗೆ ನಿಮ್ಮ ನಿಲುವೇನು’ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌, ಇಂದು ಮಲ್ಹೋತ್ರಾ ಮತ್ತು ಕೆ.ಎಂ.ಜೋಸೆಫ್‌ ಅವರಿದ್ದ ತ್ರಿಸದಸ್ಯ ಪೀಠವು ಜಕಾತ್‌ ಫೌಂಡೇಷನ್‌ ಪರ ಹಿರಿಯ ವಕೀಲ ಸಂಜಯ್‌ ಹೆಗ್ಡೆ ಅವರನ್ನು ಕೇಳಿತು.

‘ಜಕಾತ್‌ ಫೌಂಡೇಷನ್ ಒಂದು‌ ದತ್ತಿ ಸಂಸ್ಥೆ. ಇದು ಮುಸ್ಲಿಮರಷ್ಟೇ ಅಲ್ಲದೆ ಇತರ ಸಮುದಾಯದ ವಿದ್ಯಾರ್ಥಿಗಳ ತರಬೇತಿಗೂ ನೆರವು ನೀಡುತ್ತಿದೆ’ ಎಂದು ಸಂಜಯ್‌ ಅವರು ಪೀಠಕ್ಕೆ ತಿಳಿಸಿದರು.

‘ಸುದರ್ಶನ ಟಿವಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಕೆಲ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (ಎಫ್‌ಸಿಆರ್‌ಎ) ಸಂಬಂಧಿಸಿದ ದಾಖಲೆಗಳನ್ನೂ ಉಲ್ಲೇಖಿಸಲಾಗಿದೆ. ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕೊ ಬೇಡವೊ ಎಂಬುದನ್ನು ನಿಮ್ಮ ಕಕ್ಷಿದಾರರೇ ನಿರ್ಧರಿಸಬೇಕು’ ಎಂದು ಪೀಠವು ಹೆಗ್ಡೆ ಅವರಿಗೆ ಹೇಳಿತು.

‘ಜಕಾತ್‌ ಫೌಂಡೇಷನ್ ಯಾವುದೇ ವಸತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಿಲ್ಲ.‌ ಐಎಎಸ್‌ ತರಬೇತಿಗೆ ತಗಲುವ ಶುಲ್ಕವನ್ನಷ್ಟೇ ಭರಿಸುತ್ತದೆ’ ಎಂದು ಹೆಗ್ಡೆ ಅವರು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಸುದರ್ಶನ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಂದಾಸ್‌ ಬೋಲ್‌’ ಕಾರ್ಯಕ್ರಮವನ್ನು ನಿಷೇಧಿಸಬೇಕೆಂದು ಕೋರಿ ವಕೀಲ ಫೀರೋಜ್‌ ಇಕ್ಬಾಲ್‌ ಖಾನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

‘ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ವಿವಿಧ ಸಂಸ್ಥೆಗಳು ಜಕಾತ್‌ ಫೌಂಡೇಷನ್‌ಗೆ ಹಣಕಾಸಿನ ನೆರವು ನೀಡುತ್ತಿರುವುದು ವಿವಿಧ ಮೂಲಗಳಿಂದ ತಿಳಿದು ಬಂದಿದೆ. ಇದರ ಆಧಾರದಲ್ಲಿಯೇ ಸುದರ್ಶನ ಟಿವಿಯ ಸಂಪಾದಕರಾದ ಸುರೇಶ್‌ ಚಾವಂಕೆ ಅವರು ‘ಯುಪಿಎಸ್‌ಸಿ ಜಿಹಾದ್‌’ ಎಂಬ ಪದ ಪ್ರಯೋಗ ಮಾಡಿದ್ದರು’ ಎಂದು ವಾಹಿನಿಯು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

‘ಜಕಾತ್‌ ಫೌಂಡೇಷನ್‌ಗೆ ಹಣಕಾಸಿನ ನೆರವು ನೀಡುತ್ತಿರುವ ಎಲ್ಲಾ ಸಂಸ್ಥೆಗಳಿಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವಿದೆ ಎನ್ನಲಾಗದು. ಕೆಲವು ಸಂಸ್ಥೆಗಳಂತೂ ಸಂಬಂಧ ಹೊಂದಿವೆ. ಅವು ನೀಡುವ ಹಣವನ್ನು ಜಕಾತ್‌ ಫೌಂಡೇಷನ್‌ ಐಎಎಸ್‌, ಐಪಿಎಸ್‌ ಹಾಗೂ ಯುಪಿಎಸ್‌ಪಿ ಪರೀಕ್ಷೆ ಬರೆಯಲು ಇಚ್ಛಿಸುವವರ ತರಬೇತಿಗೆ ವಿನಿಯೋಗಿಸುತ್ತಿದೆ. ಈ ಸಂಬಂಧ ಗಂಭೀರ ಚರ್ಚೆಗಳಾಗಬೇಕಿದೆ. ಇದು ಸಾರ್ವಜನಿಕರಿಗೂ ತಿಳಿಯಬೇಕಿದೆ’ ಎಂದೂ ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.