ADVERTISEMENT

ಜಾತಿ | ಸ್ವಾತಂತ್ರ್ಯಪೂರ್ವದ ದಾಖಲೆಗಳೂ ಪುರಾವೆ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 16:06 IST
Last Updated 13 ಆಗಸ್ಟ್ 2025, 16:06 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಯಾವುದೇ ಒಂದು ಸಮುದಾಯವು ಪರಿಶಿಷ್ಟ ಪಂಗಡ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಾಗ, ಆ ಬೇಡಿಕೆಗೆ ಸಂಬಂಧಿಸಿ ಸ್ವಾತಂತ್ರ್ಯಪೂರ್ವ ಅವಧಿಯ ದಾಖಲೆಗಳನ್ನು ಸಾಕ್ಷ್ಯಗಳೆಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಜಾತಿ ಅಥವಾ ಪಂಗಡವೊಂದಕ್ಕೆ ಸೇರಿಸಬೇಕು ಎಂಬ ಬೇಡಿಕೆ ಮುಂದಿಟ್ಟ ಸಂದರ್ಭಗಳಲ್ಲಿ, ಪ್ರತಿ ಪ್ರಕರಣದಲ್ಲಿ ಜಾತಿ/ಪಂಗಡದ ನಿಖರತೆ ನಿರ್ಧರಿಸುವಾಗ ಅವುಗಳ ಸಂಬಂಧವನ್ನು ಪರೀಕ್ಷೆಗೆ ಒಳಪಡಿಸುವುದು ಇಡೀ ಪ್ರಕ್ರಿಯೆಯ ಅಗತ್ಯ ಭಾಗವೆಂದು ಪರಿಗಣಿಸಬೇಕಿಲ್ಲ ಎಂದೂ ಹೇಳಿದೆ.

ADVERTISEMENT

ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ, ನ್ಯಾಯಮೂರ್ತಿಗಳಾದ ಸತೀಶ್‌ಚಂದ್ರ ಶರ್ಮಾ ಹಾಗೂ ಕೆ.ವಿನೋದ್‌ ಚಂದ್ರನ್ ಅವರು ಇದ್ದ ಪೀಠ ಈ ಮಾತು ಹೇಳಿದೆ.

ತಾನು ಕೋಲಿ ಮಹಾದೇವ ‍ಪಂಗಡಕ್ಕೆ ಸೇರಿದವರು ಎಂದು ತೋರಿಸುವ ಪ್ರಮಾಣಪತ್ರವನ್ನು ಅನೂರ್ಜಿತಗೊಳಿಸಿ ಪರಿಶೀಲನಾ ಸಮಿತಿ ನೀಡಿದ್ದ ಆದೇಶವನ್ನು ಎತ್ತಿ ಹಿಡಿದು ಬಾಂಬೆ ಹೈಕೋರ್ಟ್‌ 2019ರ ಜೂನ್‌ 24ರಂದು ಆದೇಶಿಸಿತ್ತು. ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ, ಯೋಗೇಶ್‌ ಮಾಧವ ಮಕಲ್ವಾಡ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.

‘ಅರ್ಜಿದಾರರ ಕೋಲಿ ಮಹಾದೇವ ಪಂಗಡಕ್ಕೆ ಸೇರಿದವರು’ ಎಂದು ಘೋಷಿಸಿರುವ ಪೀಠ, ‘ಪರಿಶೀಲನಾ ಸಮಿತಿ ಆರು ವಾರಗಳ ಒಳಗಾಗಿ ಯೋಗೇಶ್‌ ಅವರಿಗೆ ಜಾತಿ ಪ್ರಮಾಣಪತ್ರ ನೀಡಬೇಕು’ ಎಂದು ಆಗಸ್ಟ್‌ 12ರಂದು ನೀಡಿರುವ ತೀರ್ಪಿನಲ್ಲಿ ನಿರ್ದೇಶಿಸಿದೆ.

‘ಅರ್ಜಿದಾರನ ಅಜ್ಜ ಜಲ್ಬಾ ಮಲ್ಬಾ ಮಕಲ್ವಾಡ್ ಅವರು ಕೋಲಿ ಮಹಾದೇವ ಪಂಗಡಕ್ಕೆ ಸೇರಿದವರು ಎಂಬುದಾಗಿ ಸ್ವಾತಂತ್ರ್ಯಪೂರ್ವದ ದಾಖಲೆಯಲ್ಲಿ ಉಲ್ಲೇಖಿಸಿರುವುದನ್ನು ಪೀಠ ಒಪ್ಪುತ್ತದೆ. ಅರ್ಜಿದಾರ ಕೋಲಿ ಮಹಾದೇವ ಪಂಗಡಕ್ಕೆ ಸೇರಿದ್ದಾರೆ ಎಂಬುದನ್ನು ರುಜುವಾತು ಪಡಿಸುವಲ್ಲಿ ಈ ದಾಖಲೆಗೆ ಹೆಚ್ಚು ಮೌಲ್ಯ ನೀಡಬಹುದು’ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.