ADVERTISEMENT

ಗಲ್ಲುಶಿಕ್ಷೆಗೆ ಪರ್ಯಾಯ ಆಯ್ಕೆ: ಒಪ್ಪದ ಕೇಂದ್ರ 

‘ನೇಣುಗಂಬ’ದ ಬದಲು ‘ಚುಚ್ಚುಮದ್ದು’ ಆಯ್ಕೆ ನೀಡಲು ಮನವಿ

ಪಿಟಿಐ
Published 15 ಅಕ್ಟೋಬರ್ 2025, 14:38 IST
Last Updated 15 ಅಕ್ಟೋಬರ್ 2025, 14:38 IST
New Delhi: Supreme Court of India, in New Delhi, Monday, July 31, 2023. (PTI Photo) (PTI07_31_2023_000154B)
New Delhi: Supreme Court of India, in New Delhi, Monday, July 31, 2023. (PTI Photo) (PTI07_31_2023_000154B)   

ನವದೆಹಲಿ: ‘ಮರಣದಂಡನೆ ಶಿಕ್ಷೆಗೆ ಗುರಿಯಾದ ಅಪರಾಧಿಯನ್ನು ಗಲ್ಲಿಗೇರಿಸಿ ಕೊಲ್ಲುವ ಬದಲು, ಸಿರಿಂಜ್‌ ಮೂಲಕ ವಿಷ ನೀಡುವ ಪರ್ಯಾಯ ಆಯ್ಕೆಯು ಕಾರ್ಯಸಾಧುವಲ್ಲ’ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನೇಣುಗಂಬಕ್ಕೆ ಏರಿಸಿ ಅಪರಾಧಿಯನ್ನು ಕೊಲ್ಲುವ ಬದಲು, ಮಾನವೀಯವಾದ ಪರ್ಯಾಯ ಮಾರ್ಗದ ಆಯ್ಕೆಯನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ 2023ರಲ್ಲಿ ಪ್ರಕರಣವೊಂದರಲ್ಲಿ ಹೇಳಿತ್ತು. ‘ಗಲ್ಲಿಗೇರಿಸುವ’ ಪದ್ಧತಿ ರದ್ಧತಿ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿಕ್ರಂನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ಪೀಠ ಬುಧವಾರ ನಡೆಸಿತು.

‘ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ‘ನೇಣುಗಂಬ’ ಅಥವಾ ‘ಪ್ರಾಣಹರಣ ಮಾಡುವ ಚುಚ್ಚುಮದ್ದು’ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನಾದರೂ ನೀಡಬೇಕು’ ಎಂದು ಪಿಐಎಲ್‌ ಸಲ್ಲಿಸಿರುವ ವಕೀಲ ರಿಶಿ ಮಲ್ಹೋತ್ರಾ ಕೋರ್ಟ್‌ಗೆ ಮನವಿ ಮಾಡಿದರು.

ADVERTISEMENT

‘ನೇಣುಬಿಗಿದು ಕೊಲ್ಲುವುದಕ್ಕಿಂತ ಹೆಚ್ಚು ಮಾನವೀಯವಾದ ಪರ್ಯಾಯ ಮಾರ್ಗ ಚುಚ್ಚುಮದ್ದು ನೀಡುವುದು. ಅಮೆರಿಕದಲ್ಲಿ 50ರಲ್ಲಿ 49 ರಾಜ್ಯಗಳಲ್ಲಿ ಈ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ನೇಣಿಗೇರಿಸಿದ ವ್ಯಕ್ತಿಯ ದೇಹವು 40 ನಿಮಿಷ ಹಗ್ಗದಲ್ಲೇ ನೇತಾಡುತ್ತಿರುತ್ತದೆ. ಇದು ಅನಾಗರಿಕ, ಅಮಾನವೀಯ. ಮರಣದಂಡನೆ ಶಿಕ್ಷೆ ಜಾರಿಗೊಳಿಸುವಾಗ ಮಾನವನ ಘನತೆಗೆ ಸಂಬಂಧಿಸಿದ ಅಂಶಗಳನ್ನೂ ಪರಿಗಣಿಸಬೇಕು’ ಎಂದು ಅವರು ಪೀಠದ ಗಮನಕ್ಕೆ ತಂದರು. 

ಮಲ್ಹೋತ್ರಾ ಸಲ್ಲಿಸಿರುವ ಮನವಿಯ ಬಗ್ಗೆ, ಸರ್ಕಾರಕ್ಕೆ ಸಲಹೆ ನೀಡುವಂತೆ ನ್ಯಾಯಪೀಠ, ಕೇಂದ್ರವನ್ನು ಪ್ರತಿನಿಧಿಸಿದ್ದ ವಕೀಲರಿಗೆ ಸೂಚಿಸಿತು.

‘ಈಗಾಗಲೇ ಈ ಬಗ್ಗೆ ಚರ್ಚಿಸಲಾಗಿದೆ. ಆದರೆ, ಪರ್ಯಾಯ ಆಯ್ಕೆ ನೀಡುವುದು ಕಾರ್ಯಸಾಧುವಲ್ಲ. ಇದು ಸರ್ಕಾರ ನೀತಿ ನಿರ್ಧಾರದ ಭಾಗ. ಆ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಕೇಂದ್ರವನ್ನು ಪ್ರತಿನಿಧಿಸಿದ್ದ ವಕೀಲರು ಕೋರ್ಟ್‌ಗೆ ತಿಳಿಸಿದರು.   

ಗಲ್ಲಿಗೇರಿಸುವ ಪದ್ಧತಿ ರದ್ದುಗೊಳಿಸುವ ವಿಚಾರವಾಗಿ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರ ಪ್ರಸ್ತಾವದ ಮೇರೆಗೆ, 2023ರಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿತ್ತು. ಈ ಸಮಿತಿ ಏನು ಮಾಡಿದೆ ಎನ್ನುವುದನ್ನೂ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ ಕೋರ್ಟ್‌, ಮುಂದಿನ ವಿಚಾರಣೆಯನ್ನು ನವೆಂಬರ್‌ 11ಕ್ಕೆ ನಿಗದಿಪಡಿಸಿತು.

‘ಪರ್ಯಾಯ ಮಾರ್ಗ ಅರಸಬೇಕಿದೆ’

‘ಸಮಸ್ಯೆಯೆಂದರೆ ಸರ್ಕಾರವು ಕಾಲಕ್ಕೆ ತಕ್ಕಂತೆ ಸುಧಾರಣಾವಾದಿ ಆಲೋಚನೆಗಳನ್ನು ಅಳವಡಿಸಿಕೊಂಡಿಲ್ಲ. ಈಗ ಕಾಲ ಬದಲಾಗಿದೆ. ಮರಣದಂಡನೆ ಶಿಕ್ಷೆ ಜಾರಿಯಲ್ಲೂ ಪರ್ಯಾಯ ಮಾರ್ಗ ಅರಸಬೇಕಿದೆ’ ಎಂದು ನ್ಯಾಯಮೂರ್ತಿ ಸಂದೀಪ್‌ ಮೆಹ್ತಾ ಅಭಿಪ್ರಾಯಪಟ್ಟರು.  ‘ಮರಣದಂಡನೆ ಶಿಕ್ಷೆ ಜಾರಿಯಲ್ಲಿ ನಿರ್ದಿಷ್ಟ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಶಾಸಕಾಂಗಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.