ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಬಡ್ತಿ ನೀಡುವುದಕ್ಕಾಗಿ ವಿವಿಧ ಹೈಕೋರ್ಟ್‌ಗಳ ಐವರು ನ್ಯಾಯಮೂರ್ತಿಗಳ ಹೆಸರುಗಳನ್ನು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಮಂಗಳವಾರ ಶಿಫಾರಸು ಮಾಡಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದಲ್ಲಿ ನಡೆದ ಕೊಲಿಜಿಯಂನ ಮೊದಲ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ನ್ಯಾಯಮೂರ್ತಿ ಪಂಕಜ್ ಮಿಥಾಲ್ (ಪ್ರಸ್ತುತ ರಾಜಸ್ಥಾನ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ), ನ್ಯಾಯಮೂರ್ತಿ ಸಂಜಯ್ ಕರೋಲ್(ಸಿಜೆ, ಪಟ್ನಾ ಹೈಕೋರ್ಟ್), ನ್ಯಾಯಮೂರ್ತಿ ಪಿ.ವಿ.ಸಂಜಯಕುಮಾರ್ (ಸಿಜೆ, ಮಣಿಪುರ ಹೈಕೋರ್ಟ್), ನ್ಯಾಯ
ಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ (ನ್ಯಾಯಮೂರ್ತಿ ಪಟ್ನಾ ಹೈಕೋರ್ಟ್) ಹಾಗೂ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.
ಕೊಲಿಜಿಯಂ ಸದಸ್ಯರಾದ ನ್ಯಾಯಮೂರ್ತಿಗಳಾದ ಸಂಜಯಕಿಶನ್ ಕೌಲ್, ಎಸ್.ಅಬ್ದುಲ್ ನಜೀರ್, ಕೆ.ಎಂ.ಜೋಸೆಫ್, ಎಂ.ಆರ್.ಶಾ ಹಾಗೂ ಸಂಜೀವ್ ಖನ್ನಾ ಅವರು ಸಭೆಯಲ್ಲಿ ಇದ್ದರು.
ಸದಸ್ಯರ ಸಂಖ್ಯೆ 6ಕ್ಕೆ ಏರಿಕೆ: ಸುಪ್ರೀಂ ಕೋರ್ಟ್ ಕೊಲಿಜಿಯಂ, ಮುಖ್ಯ ನ್ಯಾಯಮೂರ್ತಿ ಹಾಗೂ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುತ್ತದೆ. ಆದರೆ, ಈಗ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಕೊಲಿಜಿಯಂನ ಭಾಗವಾಗಿರುವುದರಿಂದ ಸದಸ್ಯರ ಸಂಖ್ಯೆ ಆರಕ್ಕೆ ಏರಿದೆ.
ಸದಸ್ಯರಾಗಿರುವ ಉಳಿದ ನಾಲ್ವರು ನ್ಯಾಯಮೂರ್ತಿಗಳ ಪೈಕಿ ಯಾರೂ ಭವಿಷ್ಯದಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಹುದ್ದೆಗೇರುವುದಿಲ್ಲ. ಹೀಗಾಗಿ, ಇವರ ಪೈಕಿ ಯಾರೂ ಕೊಲಿಜಿಯಂನ ಮುಖ್ಯಸ್ಥರಾಗುವುದಿಲ್ಲ. ಈ ಕಾರಣಕ್ಕಾಗಿ ನ್ಯಾಯಮೂರ್ತಿ ಖನ್ನಾ ಅವರನ್ನು ಕೊಲಿಜಿಯಂ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಸಿಜೆಐ ಚಂದ್ರಚೂಡ್ ಅವರು 2024ರ ನವೆಂಬರ್ 11ರಂದು ನಿವೃತ್ತರಾಗುವರು. ನಂತರ, ನ್ಯಾಯಮೂರ್ತಿ ಖನ್ನಾ ಅವರು ಸಿಜೆಐ ಆಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.