ಸುಪ್ರೀಂ ಕೋರ್ಟ್
ನವದೆಹಲಿ: ಪಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳ ಸಮಿತಿಯು (ಕೊಲಿಜಿಯಂ) ಮಂಗಳವಾರ ಶಿಫಾರಸು ಮಾಡಿದೆ.
ಅಲ್ಲದೆ, ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರನ್ನು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಹಾಗೂ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಲೋಕ್ ಅರಾಧೆ ಅವರನ್ನು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ವರ್ಗಾವಣೆ ಮಾಡಲು ಕೂಡ ಕೊಲಿಜಿಯಂ ಶಿಫಾರಸು ಮಾಡಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಕೊಲಿಜಿಯಂ ಮಂಗಳವಾರ ಸಭೆ ನಡೆಸಿ, ನ್ಯಾಯಮೂರ್ತಿ ಚಂದ್ರನ್ ಅವರ ಹೆಸರನ್ನು ಬಡ್ತಿಗೆ ಶಿಫಾರಸು ಮಾಡಲು ಸರ್ವಾನುಮತದಿಂದ ತೀರ್ಮಾನಿಸಿತು.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸೂರ್ಯಕಾಂತ್, ಹೃಷಿಕೇಶ್ ರಾಯ್ ಮತ್ತು ಅಭಯ್ ಎಸ್. ಓಕ ಅವರು ಕೊಲಿಜಿಯಂ ಸದಸ್ಯರು.
ಚಂದ್ರನ್ ಅವರು 2011ರ ನವೆಂಬರ್‌ನಲ್ಲಿ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕ ಆಗಿದ್ದರು. 2023ರ ಮಾರ್ಚ್‌ನಲ್ಲಿ ಅವರನ್ನು ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.