ADVERTISEMENT

ಉಮೇಶ್‌ ರೆಡ್ಡಿಗೆ ಮರಣದಂಡನೆ ಬದಲು ಜೀವಾವಧಿ ಶಿಕ್ಷೆ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 19:30 IST
Last Updated 4 ನವೆಂಬರ್ 2022, 19:30 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಬೆಳಗಾವಿ ಜೈಲಿನಲ್ಲಿರುವಸರಣಿ ಅತ್ಯಾಚಾರ, ದರೋಡೆ ಮತ್ತು ಕೊಲೆ ಪ್ರಕರಣಗಳ ಅಪರಾಧಿ ವಿಕೃತಕಾಮಿ ಉಮೇಶ್‌ ರೆಡ್ಡಿ ಅಲಿಯಾಸ್‌ ಬಿ.ಎ. ಉಮೇಶ್‌ಗೆ ಮರಣ ದಂಡನೆಯಿಂದ ವಿನಾಯಿತಿ ನೀಡಿರುವ ಸುಪ್ರೀಂ ಕೋರ್ಟ್‌, 30 ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಶುಕ್ರವಾರ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಮತ್ತು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್‌ ಮತ್ತು ಬೇಲಾ ಎಂ.ತ್ರಿವೇದಿ ಅವರಿದ್ದ ಪೀಠವು ಈ ತೀರ್ಪು ನೀಡಿದೆ.ವಿಚಾರಣಾ ನ್ಯಾಯಾಲಯದಿಂದ ಮರಣ ದಂಡನೆಗೆ ಗುರಿಯಾಗಿದ್ದಉಮೇಶ್‌ ರೆಡ್ಡಿ 10 ವರ್ಷಗಳಿಂದ ಬೆಳಗಾವಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
‘ಕಾನೂನು ಉಲ್ಲಂಘಿಸಿ ಏಕಾಂತದ ಬಂಧನದಲ್ಲಿರಿಸಿದ್ದು, ಇದರಿಂದ ತನ್ನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಅಪರಾಧಿ ಸಲ್ಲಿಸಿರುವ ಅರ್ಜಿ ಪರಿಗಣಿಸುವ ಮೊದಲು ಪೀಠವು,ಕನಿಷ್ಠ 30 ವರ್ಷ ಶಿಕ್ಷೆ ಅನುಭವಿಸಬೇಕು’ ಎಂದು ಆದೇಶಿಸಿತು.

ರೆಡ್ಡಿ ಸಲ್ಲಿಸಿದ್ದ ಕ್ಷಮಾಪಣಾ ಅರ್ಜಿಯನ್ನು2021ರಸೆಪ್ಟೆಂಬರ್ 29ರಂದು ಹೈಕೋರ್ಟ್ ರದ್ದುಪಡಿಸಿತ್ತು. ಕ್ಷಮಾಪಣಾ ಅರ್ಜಿಯ ವಿಚಾರಣೆ ವಿಳಂಬದ ಕಾರಣ ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ. ಜತೆಗೆ ವಿಚಾರಾಣಾ ನ್ಯಾಯಾಲಯ 2006ರಲ್ಲಿ ತನಗೆ ಮರಣ ದಂಡನೆ ವಿಧಿಸಿದಾಗಿನಿಂದಲೂ ಏಕಾಂತದ ಬಂಧನದಲ್ಲಿರಿಸಿದ್ದನ್ನೂ ಪ್ರಶ್ನಿಸಿದ್ದ.
ಮರಣ ದಂಡನೆಗೆ ಗುರಿಯಾಗಿದ್ದ ಅಪರಾಧಿಯಕ್ಷಮಾಪಣೆಅರ್ಜಿ ವಿಲೇವಾರಿಗೆ ಎರಡು ವರ್ಷ ಮತ್ತು ಮೂರು ತಿಂಗಳು (2011ರ ಮಾರ್ಚ್‌ 3– 2013ರ ಮೇ 12) ಸಮಯ ತೆಗೆದುಕೊಂಡಿರುವುದನ್ನು ಪೀಠ ಗಮನಿಸಿತು.

‘ಏಕಾಂತದ ಬಂಧನ ಅರ್ಜಿದಾರನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ ದೃಷ್ಟಿಯಲ್ಲಿ ಅರ್ಜಿದಾರ ಮರಣದಂಡನೆಗೆ ಬದಲು ಜೀವಿತಾವಧಿ ಶಿಕ್ಷೆಗೆ ಪರಿವರ್ತಿಸಬಹುದು. ಮರಣದಂಡನೆ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ, ಏಳು ದಿನಗಳು ಕಳೆಯುವುದರೊಳಗಾಗಿ ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಬಾರದು. ಈ ಸಂಬಂಧ ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮುಗಿಸಿಕೊಂಡ ಮೇಲೆಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಬೇಕು’ ಎಂದು ಪೀಠ ಸ್ಪಷ್ಟಪಡಿಸಿತು.
2016ರಲ್ಲಿಮರಣ ದಂಡನೆ ತೀರ್ಪು ಮರುಪರಿಶೀಲಿಸಲು ಕೋರಿ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ‘ಅರ್ಜಿದಾರನು ಸಮಾಜಕ್ಕೆ ಅಪಾಯಕಾರಿ ಮತ್ತು ಬೆದರಿಕೆಯಾಗಿದ್ದಾನೆ’ ತೀರ್ಮಾನಿಸಿ, ರೆಡ್ಡಿಗೆ ವಿಧಿಸಿದ್ದ ಮರಣ ದಂಡನೆಯನ್ನು ಎತ್ತಿಹಿಡಿದಿತ್ತು.

ವಿಧವೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪದ ಮೊದಲ ಪ್ರಕರಣ 1998ರ ಫೆಬ್ರುವರಿ 28ರಂದು ರೆಡ್ಡಿ ವಿರುದ್ಧ ಬೆಂಗಳೂರಿನ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ಅಲ್ಲದೆ ರೆಡ್ಡಿ ವಿರುದ್ಧ ಇಂತಹದೇ ಏಳು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದವು. ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ ಆಗಿದ್ದ ಈತತನ್ನ ವಿಕೃತ ಲೈಂಗಿಕ ಅಪರಾಧಗಳಿಂದ ‘ವಿಕೃತ ಕಾಮಿ’ ಎಂದೇ ಕುಖ್ಯಾತನಾಗಿದ್ದಾನೆ. ಮಹಿಳೆಯರನ್ನು ಕೊಲೆ ಮಾಡಿದ ಶವದ ಮೇಲೆ ಅತ್ಯಾಚಾರ ಎಸಗುತ್ತಿದ್ದ ಅಪರಾಧ ಈತನ ವಿರುದ್ಧ ಸಾಬೀತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.