ADVERTISEMENT

ನ್ಯಾಯಾಂಗ ವಿರುದ್ಧ ಟೀಕೆ: ಧನಕರ್, ರಿಜಿಜು ವಿರುದ್ಧ ಅರ್ಜಿ ತಳ್ಳಿ ಹಾಕಿದ ‘ಸುಪ್ರೀಂ‘

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮೇ 2023, 10:35 IST
Last Updated 15 ಮೇ 2023, 10:35 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ನ್ಯಾಯಾಂಗ ಹಾಗೂ ಕೊಲಿಜಿಯಂ ವ್ಯವಸ್ಥೆಯನ್ನು ಟೀಕೆ ಮಾಡಿದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹಾಗೂ ಕಾನೂನು ಸಚಿವ ಕಿರಣ್‌ ರಿಜಿಜು ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಳ್ಳಿ ಹಾಕಿದೆ.

ಈ ಅರ್ಜಿಯನ್ನು ಈ ಹಿಂದೆ ಬಾಂಬೆ ಹೈಕೋರ್ಟ್‌ ತಳ್ಳಿ ಹಾಕಿತ್ತು. ಇದನ್ನು ಪ್ರಶ್ನೆ ಮಾಡಿ ಬಾಂಬೆ ವಕೀಲ ಒಕ್ಕೂಟ ಸುಪ್ರಿಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌, ನ್ಯಾ. ಪಿ.ಎಸ್‌ ನರಸಿಂಹ ಹಾಗೂ ನ್ಯಾ. ಜೆ.ಬಿ ಪರ್ಡಿವಾಲ ಅವರಿದ್ದ ಪೀಠ ಸೋಮವಾರ ಮೇಲ್ಮನವಿಯನ್ನೂ ತಳ್ಳಿ ಹಾಕಿದೆ.

ADVERTISEMENT

‘ಹೈಕೋರ್ಟ್‌ ನಿರ್ಧಾರ ಸರಿಯಾಗಿಯೇ ಇದೆ ಎಂದು ನಾವು ನಂಬುತ್ತೇವೆ. ಸರಿಯಲ್ಲದ ಹೇಳಿಕೆ ಯಾರೇ ನೀಡಿದರೂ, ಈಗಾಗಲೇ ಈ ಬಗ್ಗೆ ಸುಪ್ರೀಂ ಕೋರ್ಟ್ ದೀರ್ಘವಾದ ಅಭಿಪ್ರಾಯ ವ್ಯಕ್ತಪಡಿಸಿದೆ‘ ಎಂದು ಪೀಠ ಹೇಳಿದೆ.

ಭಾರತದ ಸುಪ್ರೀಂ ಕೋರ್ಟ್‌ನ ಪರಿದಿ ಅಕಾಶದೆತ್ತರವಾಗಿದ್ದು, ಯಾವುದೇ ವ್ಯಕ್ತಿಯ ಹೇಳಿಕೆಯಿಂದ ಅದು ಸವೆದು ಹೋಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿತ್ತು.

ಇವರಿಬ್ಬರ ಹೇಳಿಕೆ ನ್ಯಾಯಾಂಗ ಮಾತ್ರವಲ್ಲ, ಸಂವಿಧಾನದ ಮೇಲಿನ ದಾಳಿ ಎಂದು ಹೇಳಿದ್ದ ಅರ್ಜಿದಾದರರು, ಉಪರಾಷ್ಟ್ರಪತಿ ಹುದ್ದೆಯ ಅಧಿಕಾರವನ್ನು ಚಲಾಯಿಸಲು ಜಗದೀಪ್‌ ಧನಕರ್‌ ಹಾಗೂ ಕಾನೂನು ಸಚಿವರ ಅಧಿಕಾರವನ್ನು ಚಲಾಯಿಸಲು ಕಿರಣ್‌ ರಿಜಿಜು ಅವರನ್ನು ತಡೆ ಹಿಡಿಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.