ADVERTISEMENT

ರಫೇಲ್‌ ಒಪ್ಪಂದ: ಮೇ 4ರ ಒಳಗೆ ಉತ್ತರಿಸಲು ಕೇಂದ್ರಕ್ಕೆ ಸುಪ್ರಿಂ ನಿರ್ದೇಶನ

ಪುನರ್‌ಪರಿಶೀಲನಾ ಅರ್ಜಿಯ ವಿಚಾರಣೆ

ಪಿಟಿಐ
Published 30 ಏಪ್ರಿಲ್ 2019, 20:03 IST
Last Updated 30 ಏಪ್ರಿಲ್ 2019, 20:03 IST
   

ನವದೆಹಲಿ: ರಫೇಲ್‌ ಒಪ್ಪಂದ ಕುರಿತು 2018ರ ಡಿಸೆಂಬರ್‌ 14ರಂದು ನೀಡಿರುವ ತೀರ್ಪು ಪುನರ್‌ಪರಿಶೀಲಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮೇ 4ರ ಒಳಗೆ ಉತ್ತರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕೇಂದ್ರಕ್ಕೆ ಸೂಚಿಸಿದೆ.

ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನ ಖರೀದಿಸಲು ಭಾರತ ಮಾಡಿಕೊಂಡಿರುವ ಒಪ್ಪಂದವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು.

ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಸಲ್ಲಿಸಿದ ಕೋರಿಕೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ತಿರಸ್ಕರಿಸಿತು.

ADVERTISEMENT

ಶನಿವಾರದ ತನಕ ಪ್ರತಿಕ್ರಿಯೆ ಸಲ್ಲಿಸಲೇಬೇಕು ಎಂದು ಸ್ಪಷ್ಟವಾಗಿ ಸೂಚಿಸಿತು.

ಅರ್ಜಿಗಳ ವಿಚಾರಣೆಯನ್ನು ಮೇ 6ಕ್ಕೆ ನಡೆಸುವುದಾಗಿ ಪೀಠವು ತಿಳಿಸಿದೆ. ಎಸ್‌.ಕೆ. ಕೌಲ್‌ ಮತ್ತು ಕೆ.ಎಂ. ಜೋಸೆಫ್‌ ಪೀಠದಲ್ಲಿರುವ ಇತರ ನ್ಯಾಯಮೂರ್ತಿಗಳು.

ಕೇಂದ್ರದ ಮಾಜಿ ಸಚಿವ ಅರುಣ್‌ ಶೌರಿ ಮತ್ತು ಯಶವಂತ್‌ ಸಿನ್ಹಾ ಹಾಗೂ ಸಾಮಾಜಿಕ ಹೋರಾಟಗಾರ ಮತ್ತು ವಕೀಲ ಪ್ರಶಾಂತ್‌ ಭೂಷಣ್‌ ಅವರು ಡಿಸೆಂಬರ್‌ 14ರ ತೀರ್ಪು ಪುನರ್‌ಪರಿಶೀಲಿಸುವಂತೆ ಜನವರಿ 2ರಂದು ಅರ್ಜಿ ಸಲ್ಲಿಸಿದ್ದರು. ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಸಹ ಪ್ರತ್ಯೇಕವಾಗಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ಸರ್ಕಾರ ನೀಡಿದ ತಪ್ಪು ಮಾಹಿತಿ ಮೇಲೆ ನ್ಯಾಯಾಲಯ ಅವಲಂಬನೆಯಾಗಿ ತೀರ್ಪು ನೀಡಿದೆ ಎಂದು ಪ್ರತಿಪಾದಿಸಿ ಸಿನ್ಹಾ, ಶೌರಿ ಮತ್ತು ಭೂಷಣ್‌ ಅವರು ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ರಫೇಲ್‌ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆ ನಿರ್ಧಾರದ ಬಗ್ಗೆ ಅನುಮಾನ ಪಡಬೇಕಾಗಿಲ್ಲ ಎಂದು ತಿಳಿಸಿದ್ದ ನ್ಯಾಯಪೀಠವು, ಇದಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತ್ತು.

ಖಾಸಗಿ ಕಂಪನಿಗೆ ಲಾಭ ಮಾಡಿಕೊಟ್ಟಿರುವ ಕುರಿತು ಯಾವುದೇ ಸಾಕ್ಷ್ಯಾಧಾರಗಳು ಸಹ ಇಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.