ADVERTISEMENT

ವಾಟ್ಸ್‌ಆ್ಯಪ್‌ ಖಾಸಗಿತನದ ನೀತಿ: ವ್ಯಾಪಕ ಪ್ರಚಾರ ನೀಡಲು ಸುಪ್ರೀಂ ಕೋರ್ಟ್‌ ಸೂಚನೆ

ವಾಟ್ಸ್‌ಆ್ಯಪ್‌ ಕಂಪನಿಗೆ ಸುಪ್ರೀಂ ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 16:42 IST
Last Updated 1 ಫೆಬ್ರುವರಿ 2023, 16:42 IST
.
.   

ನವದೆಹಲಿ: ‘ತಾನು 2021ರಲ್ಲಿ ಜಾರಿಗೊಳಿಸಿರುವ ಖಾಸಗಿತನದ ನೀತಿಯನ್ನು ಸ್ವೀಕರಿಸಲೇಬೇಕೆಂದು ಬಳಕೆದಾರರ ಮೇಲೆ ಒತ್ತಡ ಹೇರಿಲ್ಲ ಎಂದು ವಾಟ್ಸ್‌ಆ್ಯಪ್‌ ಕಂಪನಿಯು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಈ ಹಿಂದೆಯೇ ತಿಳಿಸಿದೆ. ಈ ವಿಚಾರವನ್ನು ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡುವಂತೆ ಆ ಕಂಪನಿಗೆ ನಾವು ತಾಕೀತು ಮಾಡುತ್ತಿದ್ದೇವೆ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಬಳಕೆದಾರರ ದತ್ತಾಂಶವನ್ನು ಫೇಸ್‌ಬುಕ್‌ ಹಾಗೂ ಇತರರೊಂದಿಗೆ ಹಂಚಿಕೊಳ್ಳುವ ಕುರಿತ ವಾಟ್ಸ್‌ಆ್ಯಪ್‌ ನೀತಿಯನ್ನು ವಿದ್ಯಾರ್ಥಿಗಳಾದ ಕರ್ಮಣ್ಯ ಸಿಂಗ್‌ ಸರೀನ್‌ ಮತ್ತು ಶ್ರೇಯಾ ಸೇಥಿ ಎಂಬುವರು ಪ್ರಶ್ನಿಸಿದ್ದರು. ಈ ನೀತಿಯು ತಮ್ಮ ಖಾಸಗಿತನ ಹಾಗೂ ಮುಕ್ತ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ದೂರಿದ್ದರು.

ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠವು ಬುಧವಾರ ಇದರ ವಿಚಾರಣೆ ನಡೆಸಿತು.

ADVERTISEMENT

‘ಖಾಸಗಿತನದ ನೀತಿಯನ್ನು ಒಪ್ಪದಿದ್ದರೂ (ಅಪ್ಡೇಟ್‌) ಸಂದೇಶ ವಿನಿಮಯ ಮಾಡಲು ಬಳಕೆದಾರರಿಗೆ ಅವಕಾಶ ನೀಡುವುದಾಗಿ ವಾಟ್ಸ್‌ಆ್ಯಪ್‌ ತಿಳಿಸಿದೆ. ಈ ಕುರಿತು ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಿದರೆ ನೀತಿಗೆ ವಿರೋಧ ವ್ಯಕ್ತಪಡಿಸಿರುವವರಿಗೆ ಅನುಕೂಲವಾಗಲಿದೆ. ಹೀಗಾಗಿ ರಾಷ್ಟ್ರೀಯ ಮಟ್ಟದ ಯಾವುದಾದರೂ ಐದು ಪತ್ರಿಕೆಗಳಿಗೆ ಈ ಕುರಿತು ಎರಡು ಬಾರಿ ಜಾಹೀರಾತು ನೀಡಿ’ ಎಂದು ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ, ಅನಿರುದ್ಧ ಬೋಸ್‌, ಹೃಶಿಕೇಷ್‌ ರಾಯ್‌ ಮತ್ತು ಸಿ.ಟಿ.ರವಿಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠವು ವಾಟ್ಸ್‌ಆ್ಯಪ್‌ ಕಂಪನಿಗೆ ಸೂಚಿಸಿದೆ. ಈ ಕುರಿತ ವಿಚಾರಣೆಯನ್ನು ಏಪ್ರಿಲ್‌ 11ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.