ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಲಖನೌ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ನೀಡಿರುವ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 4ರ ವರೆಗೆ ವಿಸ್ತರಿಸಿದೆ.
2022ರಲ್ಲಿ ನಡೆಸಿದ 'ಭಾರತ ಜೋಡೊ ಯಾತ್ರೆ' ವೇಳೆ ಭಾರತೀಯ ಸೇನೆ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ರಾಹುಲ್ ಮೇಲಿದೆ.
ನ್ಯಾ. ಎಂ.ಎಂ. ಸುಂದರೇಶ್ ಹಾಗೂ ನ್ಯಾ. ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ, ಪ್ರಕರಣದ ವಿಚಾರಣೆಗೆ ತಡೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಸಮನ್ಸ್ ನೀಡಿದ್ದನ್ನು ಪ್ರಶ್ನಿಸಿ ರಾಹುಲ್ ಅವರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಮೇಲ್ಮನವಿಯನ್ನು ಹೈಕೋರ್ಟ್ ಮೇ 29ರಂದು ವಜಾ ಮಾಡಿತ್ತು. ಇದರ ವಿರುದ್ಧ ರಾಹುಲ್, ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ರಾಹುಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 4ರಂದು ನಡೆಸಿದ್ದ ಸುಪ್ರೀಂ ಕೋರ್ಟ್, ಮುಂದಿನ ಆದೇಶದ ವರೆಗೆ ಕೆಳ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿತ್ತು.
ಅದೇ ವೇಳೆ, 'ಭಾರತದ 2,000 ಚದರ ಕಿ.ಮೀ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬುದು ನಿಮಗೆ ಹೇಗೆ ಗೊತ್ತು? ನೀವು ಅಲ್ಲಿ ಇದ್ದೀರಾ? ನಿಮ್ಮ ಬಳಿ ವಿಶ್ವಾಸಾರ್ಹ ಸಾಕ್ಷ್ಯಗಳಿವೆಯೇ?' ಎಂದು ಪೀಠವು ರಾಹುಲ್ ಅವರನ್ನು ಪ್ರಶ್ನಿಸಿತ್ತು. ಹಾಗೆಯೇ, 'ಯಾವುದೇ ಆಧಾರಗಳಿಲ್ಲದೆ ನೀವು ಅಂತಹ ಹೇಳಿಕೆ ನೀಡಿದ್ದು ಏಕೆ? ನೀವು ನಿಜವಾದ ಭಾರತೀಯ ಆಗಿದ್ದರೆ ಹಾಗೆ ಹೇಳುತ್ತಿರಲಿಲ್ಲ' ಎಂದು ಖಾರವಾಗಿ ಹೇಳಿತ್ತು.
ರಾಹುಲ್ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, 'ವಿರೋಧ ಪಕ್ಷದ ನಾಯಕ ಇಂತಹ ವಿಷಯಗಳ ಬಗ್ಗೆ ಮಾತನಾಡಬಾರದು ಎಂದಾದರೆ, ಅದು ದುರದೃಷ್ಟಕರ ಸಂಗತಿ. ಮಾಧ್ಯಮಗಳಲ್ಲಿ ಪ್ರಕಟವಾದ ವಿಷಯಗಳನ್ನು ಹೇಳಬಾರದು ಎಂದಾದರೆ, ಅವರು ವಿರೋಧ ಪಕ್ಷದ ನಾಯಕರಾಗಿರಲು ಸಾಧ್ಯವಿಲ್ಲ' ಎಂದು ವಾದಿಸಿದ್ದರು.
ಬಳಿಕ ಸುಪ್ರೀಂ ಕೋರ್ಟ್, ರಾಹುಲ್ ಅವರ ಮೇಲ್ಮನವಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ದೂರುದಾರರ ಪ್ರತಿಕ್ರಿಯೆ ಕೇಳಿತ್ತು.
'ಭಾರತ್ ಜೋಡೊ ಯಾತ್ರೆ'ಯ ಸಂದರ್ಭದಲ್ಲಿ 2022ರ ಡಿಸೆಂಬರ್‌ನಲ್ಲಿ ರಾಹುಲ್ ಅವರು ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉದಯ್ ಶಂಕರ್ ಶ್ರೀವಾಸ್ತವ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.