ADVERTISEMENT

ಧಾರ್ಮಿಕ ಕೇಂದ್ರಗಳ ಮೇಲೆ ಹಸಿರು ಧ್ವಜ ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:32 IST
Last Updated 20 ಜುಲೈ 2019, 19:32 IST
   

ನವದೆಹಲಿ: ಧಾರ್ಮಿಕ ಕೇಂದ್ರಗಳ ಮೇಲೆ ಅರ್ಧಚಂದ್ರ ಮತ್ತು ನಕ್ಷತ್ರದ ಚಿತ್ರ ಹೊಂದಿರುವ ಹಸಿರು ಧ್ವಜ ಹಾರಿಸುವುದನ್ನು ನಿಷೇಧಿಸುವಂತೆ ಕೋರಿ ಶಿಯಾ ವಕ್ಫ್‌ ಮಂಡಳಿಯ ಅಧ್ಯಕ್ಷರು ಸಲ್ಲಿಸಿದ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌ ಶನಿವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಸಯ್ಯದ್‌ ವಾಸೀಮ್‌ ರಿಜ್ವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ, ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತ ಹಾಗೂ ಅನಿರುದ್ಧ ಬೋಸ್‌ ಅವರನ್ನೊಳಗೊಂಡ ಪೀಠವು ಎರಡು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಸೂಚಿಸಿದೆ.

‘ಅರ್ಧಚಂದ್ರ ಹಾಗೂ ನಕ್ಷತ್ರವನ್ನು ಒಳಗೊಂಡ ಹಸಿರು ಧ್ವಜವು ಇಸ್ಲಾಂಗೆ ಸಂಬಂಧಿಸಿದ್ದಲ್ಲ. ಅದು ಪಾಕಿಸ್ತಾನದ ರಾಜಕೀಯ ಪಕ್ಷವೊಂದರ ಧ್ವಜವನ್ನು ಹೋಲುತ್ತದೆ’ ಎಂದು ರಿಜ್ವಿ ಅವರು ಸಲ್ಲಿಸಿದ ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.

ADVERTISEMENT

‘ಮುಂಬೈ ಹಾಗೂ ದೇಶದ ಇತರ ಕೆಲವು ಪ್ರದೇಶಗಳಲ್ಲಿ ಧಾರ್ಮಿಕ ಕೇಂದ್ರಗಳು ಹಾಗೂ ಕಟ್ಟಡಗಳ ಮೇಲೆ ಇಂಥ ಧ್ವಜ ಹಾರಾಡುವುದನ್ನು ನೋಡಿದ್ದೇನೆ. ಕೆಲವೆಡೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರ ಮಧ್ಯೆ ಉದ್ವಿಗ್ನತೆಗೆ ಈ ಧ್ವಜ ಕಾರಣವಾಗಿದೆ.

‘1906ರಲ್ಲಿ ನವಾಜ್‌ ವಕಾರ್‌ ಉಲ್‌–ಮಲಿಕ್‌ ಹಾಗೂ ಮೊಹಮ್ಮದಲಿ ಜಿನ್ನಾ ಅವರು ಆರಂಭಿಸಿದ ‘ಮುಸ್ಲಿಂ ಲೀಗ್‌’ನ ಅಧಿಕೃತ ಧ್ವಜವಾಗಿ ಇದನ್ನು ವಿನ್ಯಾಸ ಮಾಡಲಾಗಿತ್ತು. ಈಗ ಅದನ್ನು ನಮ್ಮ ‘ವಿರೋಧಿ ರಾಷ್ಟ್ರ’ ಪಾಕಿಸ್ತಾನದ ರಾಜಕೀಯ ಪಕ್ಷವಾದ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ತನ್ನ ಧ್ವಜವಾಗಿಸಿದೆ. ಆದರೆ ಭಾರತೀಯ ಮುಸ್ಲಿಮರು ಇದನ್ನು ಧಾರ್ಮಿಕ ಧ್ವಜ ಎಂದು ಭಾವಿಸಿ, ಕಟ್ಟಡಗಳು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ನಿರ್ಭಯವಾಗಿ ಹಾರಿಸುತ್ತಿದ್ದಾರೆ. ಇಸ್ಲಾಂನ ಯಾವ ಆಚರಣೆಯಲ್ಲೂ ಅರ್ಧಚಂದ್ರ, ನಕ್ಷತ್ರಗಳನ್ನು ಒಳಗೊಂಡ ಹಸಿರು ಧ್ವಜ ಬಳಕೆಯಾಗುವುದಿಲ್ಲ ಮತ್ತು ಇಸ್ಲಾಂನಲ್ಲಿ ಇದಕ್ಕೆ ಯಾವುದೇ ಪಾತ್ರ ಇಲ್ಲ’ ಎಂದು ರಿಜ್ವಿ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.