ADVERTISEMENT

ಗುಜರಾತ್‌ ನಕಲಿ ಎನ್‌ಕೌಂಟರ್‌ ಪ್ರಕರಣ: ‘ಸುಪ್ರೀಂ’ನಲ್ಲಿ ವಿಚಾರಣೆ ಆರಂಭ

ಪಿಟಿಐ
Published 18 ಜನವರಿ 2023, 16:35 IST
Last Updated 18 ಜನವರಿ 2023, 16:35 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಗುಜರಾತ್‌ನಲ್ಲಿ 2002ರಿಂದ 2006ರ ನಡುವೆ ನಡೆದ ಹಲವು ‘ನಕಲಿ ಎನ್‌ಕೌಂಟರ್‌’ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಬುಧವಾರ ಕೈಗೆತ್ತಿಕೊಂಡಿತು.

ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ಬೇಡಿ ನೇತೃತ್ವದ ಸಮಿತಿಯನ್ನು ಸುಪ್ರೀಂಕೋರ್ಟ್‌ ಈ ಹಿಂದೆ ರಚಿಸಿತ್ತು. ಈ ಸಮಿತಿಯು 2002ರಿಂದ 2006ರ ನಡುವೆ ನಡೆದ ನಕಲಿ ಎನ್‌ಕೌಂಟರ್‌ಗಳ ತನಿಖೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು 2019ರಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿತ್ತು.

17 ಪ್ರಕರಣಗಳ ಪೈಕಿ ಮೂರು ಪ್ರಕರಣಗಳಲ್ಲಿ ಪೊಲೀಸ್‌ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಸಮಿತಿ ಶಿಫಾರಸು ಮಾಡಿದೆ. ಈ ಕುರಿತ ವಿಚಾರಣೆ ಆರಂಭಿಸಿದ ನ್ಯಾಯಮೂರ್ತಿ ಎಸ್‌.ಕೆ.ಕೌಲ್‌, ಎ.ಎಸ್‌.ಓಕಾ ಮತ್ತು ಜೆ.ಬಿ. ಪರ್ದಿವಾಲಾ ಅವರ ಪೀಠ, ವಿಚಾರಣೆಯನ್ನು ಮಾರ್ಚ್‌ಗೆ ಮುಂದೂಡಿತು.

ADVERTISEMENT

ನಕಲಿ ಎನ್‌ಕೌಂಟರ್‌ಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿ ಹಿರಿಯ ಪತ್ರಕರ್ತ ಬಿ.ಜಿ. ವರ್ಗೀಸ್ ಮತ್ತು ಗೀತ ರಚನೆಕಾರ ಜಾವೆದ್‌ ಅಖ್ತರ್‌ ಅವರು 2007ರಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ವರ್ಗೀಸ್‌ ಅವರು 2014ರಲ್ಲಿ ಮೃತಪಟ್ಟಿದ್ದಾರೆ.

ಬೇಡಿ ಸಮಿತಿ ಸಲ್ಲಿಸಿದ್ದ ಅಂತಿಮ ವರದಿಯಲ್ಲಿ ಗುಜರಾತಿನ ಪೊಲೀಸರು ನಡೆಸಿದ ನಕಲಿ ಎನ್‌ಕೌಂಟರ್‌ಗಳಲ್ಲಿ ಸಮೀರ್‌ ಖಾನ್‌, ಕಸಮ್‌ ಜಾಫರ್‌ ಮತ್ತು ಹಾಜಿ ಇಸ್ಮಾಯಿಲ್‌ ಎಂಬುವರು ಹತ್ಯೆಯಾಗಿದ್ದಾರೆ ಎಂದು ಉಲ್ಲೇಖಿಸಿದೆ. ಸಮಿತಿಯು ಮೂವರು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಒಂಬತ್ತು ಪೊಲೀಸ್‌ ಅಧಿಕಾರಿಗಳ ವಿರುದ್ಧ ದೋಷಾರೋಪ ಹೊರಿಸಿದೆ. ಆದರೆ, ಯಾವುದೇ ಐಪಿಎಸ್ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಮಿತಿ ಶಿಫಾರಸು ಮಾಡಿಲ್ಲ.

ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ನೇತೃತ್ವದ ಪೀಠವು ಸಮಿತಿಯ ಅಂತಿಮ ವರದಿಯ ಗೋಪ್ಯತೆಯನ್ನು ಕಾಪಾಡುವ ಕುರಿತ ಗುಜರಾತ್‌ ಸರ್ಕಾರದ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ಲದೆ ವರದಿಯನ್ನು ಅರ್ಜಿದಾರರಿಗೆ ನೀಡುವಂತೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.