ADVERTISEMENT

4 ಕೋಟಿ ಪಡಿತರ ಚೀಟಿ ರದ್ದು: ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್‌

ಆಧಾರ್‌ ಕಾರ್ಡ್‌ಗೆ ಜೋಡಣೆಯಾಗದ ಕಾರಣ...

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 22:05 IST
Last Updated 17 ಮಾರ್ಚ್ 2021, 22:05 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ‘ಆಧಾರ್ ಕಾರ್ಡ್‌ನೊಂದಿಗೆ ಜೋಡಣೆಯಾಗಿಲ್ಲ’ ಎಂಬ ಕಾರಣದಿಂದ ದೇಶದಾದ್ಯಂತ 4 ಕೋಟಿಗೂ ಅಧಿಕ ಪಡಿತರ ಚೀಟಿಗಳನ್ನು ರದ್ದುಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಪಡಿತರ ಚೀಟಿ ರದ್ದಾಗಿದ್ದರಿಂದ ಆಹಾರ ದೊರೆಯದೇ ಹಸಿವಿನಿಂದ ಮೃತಪಟ್ಟಿದ್ದಾಳೆ ಎನ್ನಲಾದ ಜಾರ್ಖಂಡ್‌ನ 11 ವರ್ಷದ ಬಾಲಕಿಯ ತಾಯಿ ಕೊಯ್ಲಿ ದೇವಿ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠ ಈ ನೋಟಿಸ್‌ ಜಾರಿ ಮಾಡಿದೆ.

‘2017ರಿಂದ ಬಾಕಿ ಇರುವ ಈ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ನಾವು ವಿಚಾರಣೆ ಆರಂಭಿಸುತ್ತೇವೆ. ಈ ಸಂಬಂಧ ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ನೀಡಬೇಕು. ಅಲ್ಲದೆ, ಈ ಮೇಲ್ಮನವಿಯನ್ನು ವ್ಯತಿರಿಕ್ತವಾಗಿ ಪರಿಗಣಿಸಬಾರದು ಎಂದು ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ADVERTISEMENT

ಆಧಾರ್‌ ಜೋಡಣೆ ಆಗಿಲ್ಲ ಎಂಬ ನೆಪ ಮುಂದಿರಿಸಿ ಕೇಂದ್ರ ಸರ್ಕಾರ ಅಂದಾಜು 3 ಕೋಟಿಯಷ್ಟು ಹಾಗೂ ಆಯಾ ರಾಜ್ಯ ಸರ್ಕಾರಗಳು ತಲಾ 10ರಿಂದ 15 ಲಕ್ಷದಷ್ಟು ಪಡಿತರ ಚೀಟಿಗಳನ್ನು ರದ್ದುಪಡಿಸಿವೆ ಎಂದು ಅರ್ಜಿದಾರರ ಪರ ವಕೀಲ ಕಾಲಿನ್‌ ಗೊನ್ಸಾಲ್ವೀಸ್‌ ತಿಳಿಸಿದ್ದಾರೆ.

ಬುಡಕಟ್ಟು ಜನರೇ ವಾಸಿಸುವಲ್ಲಿ ಬೆರಳಚ್ಚು (ಬಯೋಮೆಟ್ರಿಕ್‌) ಗುರುತಿಸುವ ಹಾಗೂ ಕಣ್ಣಿನ ಗೆರೆ ಗುರುತಿಸುವ ಐರಿಸ್ ಸ್ಕ್ಯಾನರ್‌ಗಳು ಕಾರ್ಯ ನಿರ್ವಹಿಸಿಲ್ಲದ ಉದಾಹರಣೆಗಳೂ ಇವೆ. ಬಯೋಮೆಟ್ರಿಕ್ ದೃಢೀಕರಣ ಮತ್ತು ಆಧಾರ್‌ ಜೋಡಣೆ ಇಲ್ಲದ್ದರಿಂದಲೇ ದೇಶದಾದ್ಯಂತ ಅಂದಾಜು 4 ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದಾಗಿ ಕೇಂದ್ರ ಸರ್ಕಾರವೇ ಹೇಳಿಕೊಂಡಿದೆ ಎಂದು ಅವರು ಹೇಳಿದ್ದಾರೆ.

‘ರದ್ದಾಗಿರುವ ಪಡಿತರ ಚೀಟಿಗಳು ನಕಲಿ’ ಎಂದು ಕೇಂದ್ರ ಸರ್ಕಾರ ವಿವರಣೆ ನೀಡುತ್ತದೆ. ಆದರೆ, ಅಸಮರ್ಪಕ ಬಯೋಮೆಟ್ರಿಕ್‌ ವ್ಯವಸ್ಥೆ, ಆಧಾರ್ ಕಾರ್ಡ್‌ ದೊರೆಯದಿರುವಿಕೆ, ಗ್ರಾಮೀಣ ಪ್ರದೇಶಗಳಲ್ಲಿನ ಅಸಮರ್ಪಕ ಅಂತರ್ಜಾಲ ವ್ಯವಸ್ಥೆಯಂತಹ ತಾಂತ್ರಿಕ ಕಾರಣಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅವರು ದೂರಿದ್ದಾರೆ.

ಯಾವುದೇ ರಾಜ್ಯವೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಸೆಕ್ಷನ್ 14 ಹಾಗೂ ಸೆಕ್ಷನ್ 15ರ ಅಡಿ ಜಿಲ್ಲಾ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡಿಲ್ಲ. ಬೇರೆ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಈ ಕಾರ್ಯದ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಹೆಚ್ಚುವರಿ ಹುದ್ದೆಗೆ ನೇಮಕವಾದ ಬಹುತೇಕ ಅಧಿಕಾರಿಗಳು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ವಿತರಣಾ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಕಾರಣರಾದವರೇ ಆಗಿದ್ದಾರೆ ಎಂದೂ ಅರ್ಜಿದಾರರು ಆರೋಪಿಸಿದ್ದಾರೆ.

ದೇಶದಾದ್ಯಂತ ಜಾರಿಯಲ್ಲಿರುವ ಆಹಾರ ಭದ್ರತಾ ಕಾಯ್ದೆ ಅಡಿ ಜನಸಾಮಾನ್ಯರ ಕುಂದುಕೊರತೆ ನಿವಾರಣಾ ವ್ಯವಸ್ಥೆ ಇದೆ. ಆದರೂ ಸರ್ಕಾರ ಕೈಗೊಂಡ ಕ್ರಮವನ್ನು ತಪ್ಪಾಗಿ ಗ್ರಹಿಸಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಅಮನ್‌ ಲೇಖಿ ಹೇಳಿದ್ದಾರೆ.

‘ಆಧಾರ್ ಇರಲಿ ಅಥವಾ ಇಲ್ಲದಿರಲಿ ಆಹಾರದ ಹಕ್ಕನ್ನು ನಿರಾಕರಿಸಲಾಗದು. ಪಡಿತರ ಚೀಟಿಗೆ ಆಧಾರ್ ಜೋಡಣೆ ಆಗಿರದಿದ್ದರೆ ಪರ್ಯಾಯ ದಾಖಲೆ ಸಲ್ಲಿಸಬಹುದು’ ಎಂಬದಾಗಿ ಕೇಂದ್ರ ಸ್ಪಷ್ಟಪಡಿಸಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.