ADVERTISEMENT

ಮಾರ್ಕಂಡೇಯ ಜಲಾಶಯ ಯೋಜನೆಗೆ ತಮಿಳುನಾಡು ವಿರೋಧ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 20:09 IST
Last Updated 26 ಜುಲೈ 2019, 20:09 IST

ನವದೆಹಲಿ: ಪೆನ್ನಾರ್ ಕಣಿವೆ ವ್ಯಾಪ್ತಿಯ ನೀರು ಬಳಸಿಕೊಳ್ಳುವ ರಾಜ್ಯದ ಯೋಜನೆಗಳಿಗೆ ತಡೆ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಒಪ್ಪಿಗೆ ನೀಡಿದೆ.

ಅರ್ಜಿಯ ವಿಚಾರಣೆ ನಡೆಸುವಂತೆ ತಮಿಳುನಾಡು ಪರ ವಕೀಲ ಜಿ.ಉಮಾಪತಿ ಮಾಡಿಕೊಂಡ ಮನವಿಗೆ ಮುಖ್ಯ ನ್ಯಾಯಮುರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಸಮ್ಮತಿ ಸೂಚಿಸಿತು.

ಕೋಲಾರ ಜಿಲ್ಲೆಯ ಯರಗೋಳ ಗ್ರಾಮದ ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದರಿಂದ ತಮಿಳುನಾಡಿಗೆ ನೈಸರ್ಗಿಕವಾಗಿ ನೀರು ಹರಿಯುವುದನ್ನು ತಡೆಯಲಾಗುತ್ತಿದೆ ಎಂದು ಅವರು ದೂರಿದರು.

ADVERTISEMENT

ಕಳೆದ ಮೇ 16ರಂದು ತಮಿಳುನಾಡಿನ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಅಣೆಕಟ್ಟೆ ನಿರ್ಮಿಸುವುದಕ್ಕೆ ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ಶೇಖರಿಸಿರುವುದು ಕಂಡುಬಂದಿದೆ ಎಂದು ಅವರು ವಿವರಿಸಿದರು.

ಕರ್ನಾಟಕವು ಪೆನ್ನಾರ್‌ ಕಣಿವೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಕೆಲವು ಯೋಜನೆಗಳು ಹಾಗೂ ಕೆ.ಸಿ.ವ್ಯಾಲಿ ಯೋಜನೆಗಳಿಂದ ನದಿಯ ನೈಸರ್ಗಿಕ ಹರಿವು ಸ್ಥಗಿತಗೊಳ್ಳಲಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಜಲಾಶಯಗಳು, ಕೆರೆ–ಕಟ್ಟೆಗಳ ನಿರ್ಮಾಣ, ಚೆಕ್‌ ಡ್ಯಾಮ್‌ಗಳ ನಿರ್ಮಾಣ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸುವ ಮೂಲಕ ಕಾವೇರಿ, ಪೆನ್ನಾರ್‌ ಕಣಿವೆ ವ್ಯಾಪ್ತಿಯ ನದಿ–ತೊರೆಗಳ ಸರಾಗ ಹರಿವನ್ನು ಕರ್ನಾಟಕ ತಡೆಯುತ್ತಿದೆ. ಇದರಿಂದ ನದಿಯ ಕೆಳಹಂತದ ರಾಜ್ಯಗಳಿಗೆ ತೀವ್ರ ಸಮಸ್ಯೆಯಾಗಲಿದೆ ಎಂದು ತಿಳಿಸಲಾಗಿದೆ.

‘ಕೋಲಾರ ಜಿಲ್ಲೆಯಲ್ಲಿ ₹ 240 ಕೋಟಿ ಅಂದಾಜು ವೆಚ್ಚದಲ್ಲಿ ಕರ್ನಾಟಕ ಕೈಗೆತ್ತಿಕೊಳ್ಳಲಿರುವ ಮಾರ್ಕಂಡೇಯ ಜಲಾಶಯ ಯೋಜನೆಯಿಂದ ತಮಿಳುನಾಡಿನ ಆರು ಜಿಲ್ಲೆಗಳಿಗೆ ಹರಿಯುವ ಪೆನ್ನಾರ್‌ ನದಿಯ ಹರಿವನ್ನು ತಡೆಯಲಾಗುತ್ತಿದೆ. ಆ ಭಾಗದ ಜನರ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳಿಗೆ ಇದರಿಂದ ಸಮಸ್ಯೆಯಾಗಲಿದೆ. ಈ ಯೋಜನೆ ಕೈಗೆತ್ತಿಕೊಳ್ಳುವ ಮೊದಲು ಕರ್ನಾಟಕವು ನಮ್ಮಿಂದ ಅನುಮತಿ ಪಡೆಯುವ ಅಗತ್ಯವಿದೆ’ ಎಂದು ಪ್ರತಿಪಾದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.