ADVERTISEMENT

ವಲಸೆ ಕಾರ್ಮಿಕರನ್ನು ತವರಿಗೆ ಕಳಿಸಲು 15 ದಿನ ಗಡುವು

ನೋಂದಣಿ, ಪರ್ಯಾಯ ಉದ್ಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 20:05 IST
Last Updated 5 ಜೂನ್ 2020, 20:05 IST
3
3   

ನವದೆಹಲಿ: ಅತಂತ್ರ ಸ್ಥಿತಿಯಲ್ಲಿರುವ ವಲಸೆ ಕಾರ್ಮಿಕರನ್ನು 15 ದಿನದೊಳಗೆ ಅವರ ಊರಿಗೆ ವಾಪಸ್ ಕಳುಹಿಸಲು ಎಲ್ಲ ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿತು. ತಮ್ಮ ತವರು ರಾಜ್ಯಗಳಿಗೆ ಹಿಂದಿರುಗಿದ ಕಾರ್ಮಿಕರಿಗೆ ಅಲ್ಲಿಯೇ ಉದ್ಯೋಗದ ಅವಕಾಶಗಳನ್ನು ಸರ್ಕಾರಗಳು ಸೃಷ್ಟಿಸಬೇಕು ಎಂದೂ ಸೂಚಿಸಿತು.

ವಲಸೆ ಕಾರ್ಮಿಕರು ಊರಿಗೆ ಹಿಂದಿರುಗುವುದು ಒಂದು ಅನಿರ್ದಿಷ್ಟಾವಧಿ ಪ್ರಕ್ರಿಯೆ ಆಗಬಾರದು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ಸ್ಪಷ್ಟವಾಗಿ ಹೇಳಿತು.

ಎಷ್ಟು ಸಂಖ್ಯೆಯ ಕಾರ್ಮಿಕರು ರಾಜ್ಯಕ್ಕೆ ವಾಪಸಾಗಿದ್ದಾರೆ ಎಂದು ತಿಳಿಯುವ ನೋಂದಣಿ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸೂಚಿಸಿತು. ವಿವರವಾದ ಆದೇಶವನ್ನು ಮಂಗಳವಾರ ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿತು.

ADVERTISEMENT

ರಾಜ್ಯಗಳು ಹೇಳಿದ್ದೇನು?

* ಗುಜರಾತ್‌ನಿಂದ 20.5 ಲಕ್ಷ, ಮಹಾರಾಷ್ಟ್ರದಿಂದ 11 ಲಕ್ಷ ಕಾರ್ಮಿಕರು ವಾ‍ಪಸ್

* ಬಿಹಾರಕ್ಕೆ 28 ಲಕ್ಷ ವಲಸೆ ಕಾರ್ಮಿಕರು ವಾಪಸ್; 10 ಲಕ್ಷ ಕಾರ್ಮಿಕರಿಗೆ ಕೌಶಲ ತರಬೇತಿ ವ್ಯವಸ್ಥೆ

* ಪಶ್ಚಿಮ ಬಂಗಾಳದಲ್ಲಿ ಈಗಲೂ ಸುಮಾರು 4 ಲಕ್ಷ ಕಾರ್ಮಿಕರು ಉಳಿದುಕೊಂಡಿದ್ದಾರೆ

* ಕೇರಳ: 4.34 ಲಕ್ಷ ಕಾರ್ಮಿಕರ ಪೈಕಿ 1 ಲಕ್ಷ ಕಾರ್ಮಿಕರನ್ನು ವಾಪಸ್ ಕಳುಹಿಸಲಾಗಿದೆ

ರಾಜ್ಯದಿಂದ 3 ಲಕ್ಷ ಕಾರ್ಮಿಕರು ವಾಸಪ್‌
ಕರ್ನಾಟಕ ಸರ್ಕಾರವು ಮೇ 3ರಿಂದ ಈವರೆಗೆ ಒಟ್ಟು 3 ಲಕ್ಷ ಕಾರ್ಮಿಕರ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಿದೆ. ಹೀಗಿದ್ದರೂ ಲಕ್ಷಾಂತರ ಕಾರ್ಮಿಕರು ರಾಜ್ಯದಲ್ಲಿ ಇದ್ದಾರೆ. ಅವರನ್ನು ವಾಪಸ್ ಕಳುಹಿಸಲು ಇನ್ನೂ 15 ದಿನ ಕಾಲಾವಕಾಶ ಬೇಕು ಎಂದು ಕರ್ನಾಟಕ ಸರ್ಕಾರ ತಿಳಿಸಿತು. ತವರು ರಾಜ್ಯಕ್ಕೆ ಮರಳಬೇಕು ಎಂದು ಇಚ್ಚಿಸುವವರ ಸಂಖ್ಯೆ ಇದೀಗ ಕಡಿಮೆಯಾಗಿದೆ ಎಂದು ಸರ್ಕಾರ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.