ADVERTISEMENT

ಕಬ್ಬಿಣದ ಅದಿರು ಸಾಗಾಟಕ್ಕೆ ಅನುಮತಿ; ರಾಜ್ಯಕ್ಕೆ ’ಸುಪ್ರೀಂ‘ ನೋಟಿಸ್‌

ಅಗೆದು ಹೊರತೆಗೆದ ಕಬ್ಬಿಣ ಅದಿರು ಮಾರಾಟಕ್ಕೆ ಅನುಮತಿ ಕೋರಿ ಎಫ್‌ಐಎಂಐ ಅರ್ಜಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 16:21 IST
Last Updated 6 ಜನವರಿ 2021, 16:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ರಾಜ್ಯದ ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಅಗೆದು ಹೊರತೆಗೆಯಲಾದ ಕಬ್ಬಿಣ ಅದಿರನ್ನು ಸಾಗಿಸಲು ಅನುಮತಿ ನೀಡುವಂತೆ ಕೋರಿ ಫೆಡರೇಷನ್‌ ಆಫ್‌ ಇಂಡಿಯನ್‌ ಮಿನರಲ್ ಇಂಡಸ್ಟ್ರೀಜ್‌ (ಎಫ್‌ಐಎಂಐ)ನ ದಕ್ಷಿಣ ಭಾರತ ಶಾಖೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಈ ಹಿನ್ನೆಲೆಯಲ್ಲಿ, ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ, ವಿ.ರಾಮಸುಬ್ರಮಣಿಯನ್‌ ಅವರಿರುವ ನ್ಯಾಯಪೀಠ ಕರ್ನಾಟಕ ಸರ್ಕಾರಕ್ಕೆ ಬುಧವಾರ ನೋಟಿಸ್‌ ಜಾರಿ ಮಾಡಿದೆ.

ಗಣಿಗಾರಿಕೆ ಮೇಲ್ವಿಚಾರಣಾ ಸಮಿತಿಗೂ ನೋಟಿಸ್‌ ಜಾರಿ ಮಾಡಿರುವ ನ್ಯಾಯಪೀಠ, ವಿಚಾರಣೆಯನ್ನು ಜ. 29ಕ್ಕೆ ಮುಂದೂಡಿದೆ.

ADVERTISEMENT

‘39 ಕಂಪನಿಗಳು ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಗಣಿಕಾರಿಕೆ ನಡೆಸಲು ಲೀಸ್‌ ಪಡೆದಿದ್ದು, ಅವುಗಳ ಪರವಾನಗಿ ಅವಧಿ ಕಳೆದ ವರ್ಷ ಮಾರ್ಚ್‌ 20ಕ್ಕೆ ಮುಕ್ತಾಯಗೊಂಡಿದೆ. ಪರವಾನಗಿ ಅವಧಿ ಮುಗಿವ ಮುನ್ನವೇ ಅಂದಾಜು 23.72 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಕಬ್ಬಿಣದ ಅದಿರನ್ನು ಅಗೆದು ಹೊರತೆಗೆಯಲಾಗಿದೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

‘ಕೋವಿಡ್‌–19 ಪಿಡುಗಿನ ಕಾರಣ, ಈ ಅದಿರನ್ನು ಸಾಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅಗೆದು ಹೊರತೆಗೆಯಲಾದ ಅದಿರನ್ನು ಇ–ಹರಾಜು ಹಾಕಲು ಅನುಮತಿ ನೀಡುವಂತೆ ಮೇಲ್ವಿಚಾರಣಾ ಸಮಿತಿಗೆ ನಿರ್ದೇಶನ ನೀಡುವಂತೆ’ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.