ADVERTISEMENT

ರಾಜ್ಯ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್‌

ಕೆರೆಗಳ ಪುನಶ್ಚೇತನ: ಪ್ರತ್ಯೇಕ ವಿಚಾರಣೆ ಕೋರಿ ಮನವಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 20:30 IST
Last Updated 8 ಜನವರಿ 2020, 20:30 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಬೆಂಗಳೂರಿನ ಕೆರೆಗಳ ಪುನಶ್ಚೇತನ ಕೋರಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಗೆ ಸಲ್ಲಿಸಲಾದ ಅರ್ಜಿಯ ಪ್ರತ್ಯೇಕ ವಿಚಾರಣೆಗೆ ಸೂಚಿಸುವಂತೆ ರಾಜ್ಯಸಭೆ ಸದಸ್ಯ ಡಿ.ಕುಪೇಂದ್ರರೆಡ್ಡಿ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ತ್ರಿಸದಸ್ಯ ಪೀಠ, ಮಲಿನಗೊಂಡಿರುವ ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ದುಃಸ್ಥಿತಿ ಹಾಗೂ ದಕ್ಷಿಣ ಪಿನಾಕಿನಿ ನದಿಗೆ ವರ್ತೂರು ಕೆರೆಯ ನೀರು ಹರಿಯುತ್ತಿರುವ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕೇಂದ್ರದ ಪರಿಸರ ಸಚಿವಾಲಯ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗಳಿಗೆ ನೋಟಿಸ್‌ ನೀಡಿದೆ.

‘ಕೆರೆಗಳ ಪುನಶ್ಚೇತನ ಕೋರಿ ಸಲ್ಲಿಸಲಾದ ಮೂಲ ಅರ್ಜಿಯನ್ನು ನಮ್ಮ ಗಮನಕ್ಕೆ ತಾರದೆ ಎನ್‌ಜಿಟಿ ಇತ್ಯರ್ಥಪಡಿಸಿದ್ದು, ಪ್ರತ್ಯೇಕ ವಿಚಾರಣೆಗೆ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರ ಪರ ವಕೀಲರಾದ ಪಿ.ರಾಮಪ್ರಸಾದ್ ಹಾಗೂ ಎಸ್.ಅಭಿಮನ್ಯು ವಿಚಾರಣೆಯ ವೇಳೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ADVERTISEMENT

‘ಬೆಂಗಳೂರಿನ ಕೆರೆಗಳ ದುಃಸ್ಥಿತಿಯನ್ನು ಅರಿತ ಎನ್‌ಜಿಟಿ ಸ್ವಯಂ ಪ್ರೇರಿತ ದೂರು ದಾಖಲಿಸಿ ವಿಚಾರಣೆ ನಡೆಸಿ ಕಳೆದ ನವೆಂಬರ್‌ 6ರಂದು ಆದೇಶ ನೀಡಿದೆ. ಆದರೆ, ಅದಕ್ಕೂ ಮೊದಲೇ ಸಲ್ಲಿಸಲಾದ ನಮ್ಮ ಅರ್ಜಿಯನ್ನು ತನ್ನ ದೂರಿನೊಂದಿಗೇ ಸೇರಿಸಿಕೊಂಡಿದ್ದರೂ, ಪ್ರಕರಣ ಇತ್ಯರ್ಥಪಡಿಸುವಾಗ ಯಾವುದೇ ರೀತಿಯ ಮಾಹಿತಿ ನೀಡಿಲ್ಲ’ ಎಂದು ಅವರು ದೂರಿದರು.

ವರ್ತೂರು ಕೆರೆಯ ಶುದ್ಧೀಕರಿಸಿದ ನೀರು ದಕ್ಷಿಣ ಪಿನಾಕಿನಿ ನದಿಗುಂಟ ತಮಿಳುನಾಡಿನತ್ತ ಹರಿಯುವುದನ್ನು ನಿಯಂತ್ರಿಸುವಂತೆ ಕೋರಲಾದ ಅರ್ಜಿಯ ವಿಚಾರಣೆಯನ್ನು ಪ್ರತ್ಯೇಕವಾಗಿ ನಡೆಸುವಂತೆ ಹಸಿರು ಪೀಠಕ್ಕೆ ಸೂಚಿಸುವಂತೆಯೂ ಅವರು ಇದೇ ವೇಳೆ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.