ADVERTISEMENT

ಕೊಳಕು ಮನಸ್ಸು ತೋರಿದ ರಣವೀರ್: ಸುಪ್ರೀಂ ಕೋರ್ಟ್‌

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೇಶ್ವರ್ ಸಿಂಗ್ ಅವರು ರಣವೀರ್‌ ಅಲಹಾಬಾದಿಯಾ ಅರ್ಜಿ ವಿಚಾರಣೆ ನಡೆಸಿದರು.

ಪಿಟಿಐ
Published 18 ಫೆಬ್ರುವರಿ 2025, 6:53 IST
Last Updated 18 ಫೆಬ್ರುವರಿ 2025, 6:53 IST
<div class="paragraphs"><p>ರಣವೀರ್‌</p></div>

ರಣವೀರ್‌

   

ನವದೆಹಲಿ: ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ ಅವರು ತಾವು ನಡೆಸುವ ಕಾರ್ಯಕ್ರಮದಲ್ಲಿ ಕೆಲವು ಮಾತುಗಳ ಮೂಲಕ ತಮ್ಮ ಕೊಳಕು ಮನಸ್ಸು ಮತ್ತು ವಿಕೃತ ಮನಃಸ್ಥಿತಿಯನ್ನು ಪ್ರದರ್ಶಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌, ರಣವೀರ್ ಮತ್ತು ಅವರ ಜೊತೆಗಾರರಿಗೆ ಬಂಧನದಿಂದ ರಕ್ಷಣೆ ನೀಡಿದೆ. ರಣವೀರ್ ಅವರು ಆಡಿರುವ ಮಾತುಗಳು ಅಶ್ಲೀಲವಲ್ಲ ಎಂದಾದರೆ, ಅದು ಇನ್ನೇನು ಎಂದು ಕೋರ್ಟ್‌ ಪ್ರಶ್ನಿಸಿದೆ.

‘ಒಂದಿಷ್ಟು ಜವಾಬ್ದಾರಿ ಇರಬೇಕು. ಇಂತಹ ವರ್ತನೆಗಳನ್ನು ಖಂಡಿಸಬೇಕು... ಇದು ವ್ಯಕ್ತಿಯೊಬ್ಬನ ನೈತಿಕತೆಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಆತ ತಂದೆ–ತಾಯಿಯನ್ನು ಅವಮಾನಿಸುತ್ತಿದ್ದಾನೆ. ಈ ವ್ಯಕ್ತಿಯ ಮನಸ್ಸಿನಲ್ಲಿ ಏನೋ ಕೊಳಕಿದೆ, ಅದನ್ನು ಈ ಕಾರ್ಯಕ್ರಮದ ಮೂಲಕ ಹರಡಲಾಗುತ್ತಿದೆ’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ಪೀಠವು ಹೇಳದೆ.

ADVERTISEMENT

ವಕೀಲ ಅಭಿನವ್ ಚಂದ್ರಚೂಡ್ ಅವರು ರಣವೀರ್ ಪರವಾಗಿ ಹಾಜರಿದ್ದರು. ರಣವೀರ್ ಅವರು ತಮ್ಮ ಪಾಲಕರಿಗೆ ಏನು ಮಾಡಿದ್ದಾರೋ ಅದರ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ. ‘ನಾವು ದಂತಗೋಪುರದಲ್ಲಿ ಕುಳಿತಿಲ್ಲ. ಅವರು ಆಸ್ಟ್ರೇಲಿಯಾದ ಕಾರ್ಯಕ್ರಮವೊಂದನ್ನು ಹೇಗೆ ನಕಲು ಮಾಡಿದ್ದಾರೆ ಎಂಬುದು ನಮಗೆ ತಿಳಿದಿದೆ. ಆದರೆ ಇಂತಹ ಕಾರ್ಯಕ್ರಮಗಳಲ್ಲಿ ಒಂದು ಎಚ್ಚರಿಕೆಯೂ ಇದೆ’ ಎಂದು ಪೀಠವು ಹೇಳಿದೆ.

ರಣವೀರ್ ಅವರ ವಿರುದ್ಧ ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಬಾರದು, ಆದರೆ ಅವರು ತನಿಖೆಗೆ ಸಹಕರಿಸಬೇಕು ಎಂದು ಪೀಠವು ಸೂಚಿಸಿದೆ. ರಣವೀರ್ ಮತ್ತು ಅವರ ಜೊತೆಗಾರರು ಮುಂದಿನ ಆದೇಶದವರೆಗೆ ಬೇರೆ ಯಾವುದೇ ಕಾರ್ಯಕ್ರಮ ನಡೆಸಬಾರದು ಎಂದು ತಾಕೀತು ಮಾಡಿದೆ.

ರಣವೀರ್ ಆಡಿರುವ ಮಾತುಗಳು ತಮಗೂ ಹೇಸಿಗೆ ತರಿಸಿವೆ, ಆದರೆ ಈ ಮಾತುಗಳನ್ನು ಆಡಿರುವುದು ಕ್ರಿಮಿನಲ್ ಅಪರಾಧ ಆಗುತ್ತದೆಯೇ ಎಂಬ ಪ್ರಶ್ನೆ ಇದೆ ಎಂದು ವಕೀಲ ಅಭಿನವ್ ಹೇಳಿದರು.

ಸುಪ್ರೀಂ ಕೋರ್ಟ್ ಹೇಳಿದ್ದು...

* ರಣವೀರ್ ಅವರ ಭಾಷೆಯನ್ನು ಇಷ್ಟಪಡುವ ವ್ಯಕ್ತಿ ಭೂಮಿಯ ಮೇಲೆ ಯಾರಾದರೂ ಇದ್ದಾರಾ? ನ್ಯಾಯಾಲಯಗಳು ಅವರ ಪರವಾಗಿ ಏಕೆ ನಿಲ್ಲಬೇಕು?

* ಅವರು ಆಡಿರುವ ಮಾತುಗಳು ಈ ದೇಶದಲ್ಲಿ ಅಶ್ಲೀಲವಲ್ಲ ಎಂದಾದರೆ ಅವು ಮತ್ತಿನ್ನೇನು? 

* ತಾವು ಜನಪ್ರಿಯರಾದೆವು ಎಂಬ ಕಾರಣಕ್ಕೆ ಏನು ಬೇಕಿದ್ದರೂ ಮಾತನಾಡಬಹುದು ಎಂದು ಕೆಲವರು ಭಾವಿಸುತ್ತಾರೆ.

* ಅವರು ಬಳಸಿರುವ ಪದಗಳನ್ನು ಕಂಡು ತಂದೆ–ತಾಯಿ ನಾಚಿಕೆಪಟ್ಟಿರುತ್ತಾರೆ ಸಹೋದರಿಯರು ನಾಚಿಕೆಪಟ್ಟಿರುತ್ತಾರೆ. ಇಡೀ ಸಮಾಜಕ್ಕೆ ನಾಚಿಕೆ ಆಗಿರುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.