ಕೇಂದ್ರ ಸಚಿವ ಎಲ್. ಮುರುಗನ್
–ಪಿಟಿಐ ಚಿತ್ರ
ನವದೆಹಲಿ: 2020ರ ಡಿಸೆಂಬರ್‌ನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಎಲ್. ಮುರುಗನ್ ಅವರ ವಿರುದ್ಧ ಚೆನ್ನೈನ ಮುರಸೋಳಿ ಟ್ರಸ್ಟ್ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಪಡಿಸಿದೆ.
ಟ್ರಸ್ಟ್‌ನ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶವು ಮುರುಗನ್ ಅವರಿಗೆ ಇರಲಿಲ್ಲ ಎಂದು ಅವರ ಪರ ವಕೀಲರು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ವಿಭಾಗೀಯ ಪೀಠಕ್ಕೆ ಸ್ಪಷ್ಟಪಡಿಸಿದರು. ಈ ಹೇಳಿಕೆಯನ್ನು ಆಲಿಸಿದ ಪೀಠವು, ಮೊಕದ್ದಮೆಯನ್ನು ರದ್ದುಪಡಿಸಿತು.
ಟ್ರಸ್ಟ್‌ಗೆ ಹಾನಿ ಉಂಟುಮಾಡುವ ಉದ್ದೇಶ ತಮಗೆ ಇರಲಿಲ್ಲ ಎಂಬುದನ್ನು ಮುರುಗನ್ ಅವರು ಸ್ಪಷ್ಟಪಡಿಸಿರುವ ಕಾರಣ, ಮಾನನಷ್ಟ ಮೊಕದ್ದಮೆಯನ್ನು ಮುಂದುವರಿಸುವ ಉದ್ದೇಶ ತಮಗೆ ಇಲ್ಲ ಎಂದು ಟ್ರಸ್ಟ್ ಪರ ವಕೀಲರು ಬಹಳ ಘನತೆಯಿಂದ ಹೇಳಿದ್ದಾರೆ ಎಂಬುದನ್ನು ಪೀಠವು ದಾಖಲಿಸಿದೆ.
‘ಪ್ರತಿವಾದಿ ಟ್ರಸ್ಟ್‌ನವರು ತೋರಿದ ಘನತೆಗೆ ನಮ್ಮ ಮೆಚ್ಚುಗೆಯನ್ನು ದಾಖಲಿಸುತ್ತಿದ್ದೇವೆ’ ಎಂದು ಪೀಠವು ಹೇಳಿದೆ.
ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್‌ನ ಕ್ರಮವನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದೆ. ಜೊತೆಗೆ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಮುರುಗನ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.