ADVERTISEMENT

ಚಿನ್ನದ ಪದಕ ವಿಜೇತೆಗೆ ನೌಕರಿ ನೀಡದ ಸರ್ಕಾರಕ್ಕೆ ಸುಪ್ರೀಂ ತರಾಟೆ

ಪಿಟಿಐ
Published 28 ನವೆಂಬರ್ 2024, 15:00 IST
Last Updated 28 ನವೆಂಬರ್ 2024, 15:00 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಪೂಜಾ ಠಾಕೂರ್‌ ಅವರಿಗೆ ‘ಕ್ರೀಡಾ ಮೀಸಲಾತಿ’ಯಲ್ಲಿ  ಉದ್ಯೋಗ ನೀಡಲು ನಿರಾಕರಿಸಿದ ಹಿಮಾಚಲ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಗುರುವಾರ ತರಾಟೆಗೆ ತೆಗೆದುಕೊಂಡಿತು.

ನ್ಯಾಯಮೂರ್ತಿಗಳಾದ ಅಭಯ್‌ ಎಸ್‌. ಓಕಾ ಹಾಗೂ ಆಗಸ್ಟೀನ್‌ ಜಾರ್ಜ್‌ ಮಸೀಹ್‌ ಅವರಿದ್ದ ಪೀಠವು, 2014ರ ಏಷ್ಯನ್‌ ಕ್ರೀಡಾಕೂಟದ ಪದಕ ವಿಜೇತೆ ಪೂಜಾಗೆ ಉದ್ಯೋಗ ನೀಡದೆ ಸತಾಯಿಸಿದ ಹಿಮಾಚಲ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿತು. ‘ನೀವು ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು ಹೀಗೆಯೇ’ ಎಂದು ಕಟುವಾಗಿ ಪ್ರಶ್ನಿಸಿತು.

ಮುಖ್ಯಮಂತ್ರಿಯವರು ವಾಸ್ತವಿಕ ಧೋರಣೆಯನ್ನು ಹೊಂದಿರಬೇಕು. ಆದರೆ, ಸರ್ಕಾರವು ಕ್ರೀಡಾಪಟುಗಳೊಂದಿಗೆ ಈ ರೀತಿ ನಡೆದುಕೊಂಡಿರುವುದು ತಕ್ಕುದಾದುದೇ ಎಂದು ಪೀಠ ಕೇಳಿತು. ಅಬಕಾರಿ ಮತ್ತು ತೆರಿಗೆ ಅಧಿಕಾರಿ ಹುದ್ದೆಗೆ ಪೂಜಾ ಅವರ ನೇಮಕ ಪ್ರಶ್ನಿಸಿ ಹಿಮಾಚಲ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿತು.

ADVERTISEMENT

‘ಪೂಜಾ ಅವರಿಗೆ ಅಬಕಾರಿ ಮತ್ತು ತೆರಿಗೆ ಅಧಿಕಾರಿ ಹುದ್ದೆ ನೀಡಬೇಕೆಂದು ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶಿಸಿರುವುದನ್ನು ಪ್ರಶ್ನಿಸಿ, ಹಿಮಾಚಲ ಪ್ರದೇಶ ಸರ್ಕಾರವು ಮೇಲ್ಮನವಿ ಸಲ್ಲಿಸಿರುವ ಕ್ರಮವು ತೀರಾ ಅಸಮಂಜಸವಾದುದು’ ಎಂದು ಸುಪ್ರೀಂ ಕೋರ್ಟ್‌ ಇದೇ ವೇಳೆ ಅಭಿಪ್ರಾಯಪಟ್ಟಿತು.

ಕಬಡ್ಡಿ ಆಟಗಾರ್ತಿಯಾಗಿರುವ ಪೂಜಾ, ದಕ್ಷಿಣ ಕೊರಿಯಾದ ಇಂಚೇನ್‌ನಲ್ಲಿ 2014ರಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. 2015ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನೂ ಪಡೆದಿದ್ದಾರೆ.

ಪೂಜಾ ಅವರು ಗ್ರೇಡ್‌– 1 ಹುದ್ದೆ ಪಡೆಯಲು ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು, ಹಿಮಾಚಲ ಪ್ರದೇಶ ಸರ್ಕಾರವು ಪೂಜಾ ಅವರ ಹುದ್ದೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.