ADVERTISEMENT

ಹೈಬ್ರಿಡ್ ವಿಧಾನದಲ್ಲಿ ಬೋರ್ಡ್‌ ಪರೀಕ್ಷೆ ನಡೆಸುವಂತೆ ನಿರ್ದೇಶಿಸಲು ಸುಪ್ರೀಂ ನಕಾರ

ಸಿಬಿಎಸ್‌ಇ, ಸಿಐಎಸ್‌ಸಿಇ

ಪಿಟಿಐ
Published 18 ನವೆಂಬರ್ 2021, 10:06 IST
Last Updated 18 ನವೆಂಬರ್ 2021, 10:06 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ (ಆಫ್‌ಲೈನ್‌) ಬದಲಿಗೆ ಹೈಬ್ರಿಡ್ ವಿಧಾನ (ಆನ್‌ಲೈನ್ ಹಾಗೂ ಆಫ್‌ಲೈನ್‌) ಆಯ್ಕೆಗೆ ಅವಕಾಶ ನೀಡುವಂತೆ ಕೇಂದ್ರೀಯ ‍ಪ್ರೌಢ ಶಿಕ್ಷಣ ಮಂಡಳಿ (‌ಸಿಬಿಎಸ್‌ಇ) ಮತ್ತು ಕೌನ್ಸಿಲ್‌ ಫಾರ್‌ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್‌ಗೆ (ಸಿಐಎಸ್‌ಸಿಇ) ನಿರ್ದೇಶಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

ಸಿಬಿಎಸ್‌ಇಯ ಮೊದಲ ಅವಧಿಯ ಬೋರ್ಡ್‌ ಪರೀಕ್ಷೆಗಳು ನವೆಂಬರ್ 16ರಿಂದ ಪ್ರಾರಂಭವಾಗಿವೆ. ಸಿಐಎಸ್‌ಸಿಇ ಮೊದಲ ಸೆಮಿಸ್ಟರ್‌ನ ಬೋರ್ಡ್ ಪರೀಕ್ಷೆಗಳು ಇದೇ 22ರಿಂದ ಪ್ರಾರಂಭವಾಗಲಿವೆ ಎಂಬುದನ್ನು ಗಮನಿಸಿರುವ ಸುಪ್ರೀಂ ಕೋರ್ಟ್‌, ‘ಈ ಹಂತದಲ್ಲಿ ಪರೀಕ್ಷಾ ಪ್ರಕ್ರಿಯೆಗೆ ಅಡ್ಡಿಪಡಿಸುವುದು ಸೂಕ್ತವಲ್ಲ’ ಎಂದು ತಿಳಿಸಿದೆ.

ಕೋವಿಡ್ ಬಿಕ್ಕಟ್ಟಿನ ನಡುವೆ, 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಹೈಬ್ರಿಡ್ ವಿಧಾನದಲ್ಲಿ ನಡೆಸಲು ಪರಿಷ್ಕೃತ ಸುತ್ತೋಲೆ ಹೊರಡಿಸುವಂತೆ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇಗೆ ನಿರ್ದೇಶನ ನೀಡಲು ಕೋರಿ ಆರು ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿಯನ್ನು ಗುರುವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.‌

ADVERTISEMENT

ಸಿಬಿಎಸ್‌ಇ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ’ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಆಫ್‌ಲೈನ್‌ಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳನ್ನು 6500 ರಿಂದ 15 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಮತ್ತು ಸಿ.ಟಿ. ರವಿಕುಮಾರ್‌ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.

ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ‘ನಂಬಿಕೆ ಮತ್ತು ವಿಶ್ವಾಸ’ವಿದೆ ಎಂದು ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.