ನವದೆಹಲಿ: ಬಿಹಾರದ ಬುದ್ಧ ಗಯಾ ಮಂದಿರ ಟ್ರಸ್ಟ್ ಕಾಯ್ದೆ–1949 ಅನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್, ಸಂಬಂಧಿಸಿದ ಹೈಕೋರ್ಟ್‌ನಲ್ಲಿಯೇ ಅರ್ಜಿ ಸಲ್ಲಿಸುವಂತೆ ಸೋಮವಾರ ಸೂಚನೆ ನೀಡಿದೆ.
‘ಕಾಯ್ದೆಯಲ್ಲಿ ಕೆಲವು ಅತಿರೇಕದ ಅಂಶಗಳಿದ್ದು ಅವುಗಳನ್ನು ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ ಎಂದು ವಕೀಲರು ಪೀಠಕ್ಕೆ ತಿಳಿಸಿದರು.
‘ನೀವೇಕೆ ಇದನ್ನು ಹೈಕೋರ್ಟ್ ಮುಂದೆ ಪ್ರಸ್ತಾಪಿಸಬಾರದು. ಭಾರತದ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಅರ್ಜಿಯನ್ನು ನಾವು ಪರಿಗಣಿಸಲು ಸಾಧ್ಯವಿಲ್ಲ. ಹೈಕೋರ್ಟ್‌ಗೆ ಹೋಗುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ನೀಡಿದ್ದೇವೆ’ ಎಂದು ಪೀಠ ಹೇಳಿತು.
ಕಳೆದ ಏಪ್ರಿಲ್‌ನಲ್ಲಿ ರಾಷ್ಟ್ರೀಯ ಲೋಕ ಮೋರ್ಚಾ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಅವರು ಬುದ್ಧ ಗಯಾ ದೇಗುಲ ಕಾಯ್ದೆ–1949ರ ಕೆಲವು ಅಂಶಗಳಿಗೆ ತಿದ್ದುಪಡಿ ತರಬೇಕು. ದೇಗುಲದ ಆಡಳಿತವನ್ನು ಬೌದ್ಧ ಸಮುದಾಯಕ್ಕೆ ನೀಡಲು ಇದು ಅಗತ್ಯ ಎಂದಿದ್ದರು.
ಈ ಕಾಯ್ದೆಯಡಿ ಬಿಹಾರದ ಗಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಾಲ್ವರು ಬೌದ್ಧರು, ನಾಲ್ವರು ಹಿಂದೂಗಳನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಇದರಿಂದ ಬೌದ್ಧರಿಗೆ ಅನ್ಯಾಯವಾಗಿದೆ ಎಂಬ ವಾದ ಹಲವು ದಿನಗಳಿಂದ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.