ADVERTISEMENT

ವಿದ್ಯಾರ್ಥಿಗಳ ಜಾಮೀನು ರದ್ದತಿಗೆ ‘ಸುಪ್ರೀಂ’ ನಕಾರ

ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆ: ಹೈಕೋರ್ಟ್‌ ವ್ಯಾಖ್ಯಾನ ಪರಿಶೀಲಿಸಲು ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 22:52 IST
Last Updated 18 ಜೂನ್ 2021, 22:52 IST
   

ನವದೆಹಲಿ: ದೆಹಲಿ ಗಲಭೆ ಪ್ರಕರಣದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಜಾಮೀನು ನೀಡಿರುವ ದೆಹಲಿ ಹೈಕೋರ್ಟ್‌ನ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ, ವಿದ್ಯಾರ್ಥಿಗಳ ಜಾಮೀನಿಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ‘ಆದರೆ, ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆಯನ್ನು (ಯುಎಪಿಎ) ಸಂಕುಚಿತವಾಗಿ ವ್ಯಾಖ್ಯಾನಿಸುವುದು ಅಖಿಲ ಭಾರತ ಮಟ್ಟದಲ್ಲಿ ಪರಿಣಾಮ ಉಂಟು ಮಾಡುತ್ತದೆ. ಹೀಗಾಗಿಮೂವರು ವಿದ್ಯಾರ್ಥಿಗಳಿಗೆ
ದೆಹಲಿ ಹೈಕೋರ್ಟ್‌ ಜಾಮೀನು ನೀಡಿದ್ದನ್ನು ದೇಶದ ಯಾವುದೇ ನ್ಯಾಯಾಲಯಗಳು, ಯಾವುದೇ ಪ್ರಕರಣಗಳಲ್ಲಿ ಪೂರ್ವನಿದರ್ಶನವಾಗಿ ಪರಿಗಣಿಸಬಾರದು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮೂವರು ವಿದ್ಯಾರ್ಥಿಗಳಿಗೆ ದೆಹಲಿ ಹೈಕೋರ್ಟ್‌ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ.ರಾಮಸುಬ್ರಮಣಿಯನ್ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ.

‘ಯುಎಪಿಎಯನ್ನು ದೆಹಲಿ ಹೈಕೋರ್ಟ್‌ ವ್ಯಾಖ್ಯಾನಿಸಿರುವ ರೀತಿ, ಕಾಯ್ದೆಯ ಉದ್ದೇಶವನ್ನೇ ತಲೆಕೆಳಗು ಮಾಡುತ್ತದೆ. ದೆಹಲಿಯಲ್ಲಿ ಈ ಸಂಚಿನಿಂದ ಉಂಟಾದ ಗಲಭೆಯಲ್ಲಿ 53 ಜನರು ಸತ್ತಿದ್ದಾರೆ. 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಈ ವಿದ್ಯಾರ್ಥಿಗಳು ಈ ಗಲಭೆಗೆ ಇತರರ ಜತೆ ಸೇರಿ ಸಂಚು ರೂಪಿಸಿದ್ದರು. ಈ ಆದೇಶದಿಂದ ಹೆಚ್ಚು ಹಾನಿಯಾಗುವುದನ್ನು ತಡೆಯಬೇಕು’ ಎಂದು ದೆಹಲಿ ಪೊಲೀಸ್ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು
ಪ್ರತಿಪಾದಿಸಿದರು.

ADVERTISEMENT

‘ಈ ಆರೋಪಿಗಳು ಯಾವುದೇ ಕೃತ್ಯ ಎಸಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ನಾನು ಎಲ್ಲಾದರೂ ಬಾಂಬ್ ಇರಿಸುತ್ತೇನೆ. ಅದು ಸಿಡಿಯುವ ಮುನ್ನವೇ ಭದ್ರತಾ ಸಿಬ್ಬಂದಿ ಅದನ್ನು ನಿಷ್ಕ್ರಿಯಗೊಳಿಸುತ್ತಾರೆ. ಆಗ ನಾನು ಮಾಡಿದ ಅಪರಾಧದ ಗಂಭೀರತೆ ಕಡಿಮೆಯಾಗುತ್ತದೆಯೇ? ಪ್ರತಿಭಟಿಸುವ ಹಕ್ಕು, ಕೊಲ್ಲುವ ಹಕ್ಕನ್ನು ಒಳಗೊಂಡಿಲ್ಲ. ಪ್ರಧಾನಿ ರಾಜೀವ್ ಗಾಂಧಿಯನ್ನು ಕೊಂದ ಮಹಿಳೆ ನಾನು ಪ್ರತಿಭಟಿಸುತ್ತಿದ್ದೆ ಎಂದಷ್ಟೇ ಹೇಳಿದಾಗ, ಅದನ್ನು ಹೈಕೋರ್ಟ್ ಒಪ್ಪಿಕೊಂಡರೆ ಏನಾಗುತ್ತದೆ. ಆರೋಪಿಗಳಿಗೆ ಜಾಮೀನು ನೀಡಿರುವುದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಬದಲಿಗೆ ಆ ಆದೇಶದ ಪರಿಣಾಮವನ್ನು ತಡೆಯಿರಿ ಎಂದಷ್ಟೇ ಕೇಳಿಕೊಳ್ಳುತ್ತಿದ್ದೇನೆ’ ಎಂದು ತುಷಾರ್ ಮೆಹ್ತಾ ಅವರು
ಪ್ರತಿಪಾದಿಸಿದರು.

ಮೂವರು ವಿದ್ಯಾರ್ಥಿಗಳ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ‘ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಬಾರದು. ಆದರೆ ಆ ಆದೇಶವನ್ನು ಬೇರೆ ಯಾವ ನ್ಯಾಯಾಲಯವೂ ಪೂರ್ವನಿದರ್ಶನ ಎಂದು ಪರಿಗಣಿಸಬಾರದು ಎಂದು ಆದೇಶಿಸಬಹುದು’ ಎಂದು ಪ್ರತಿಪಾದಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ಪೀಠವು, ‘ಸದ್ಯದ ಮಟ್ಟಿಗೆ ಜಾಮೀನು ರದ್ದುಪಡಿಸುವುದಿಲ್ಲ’ ಎಂದು ಹೇಳಿತು. ‘ಆದರೆ, ಯುಎಪಿಎಯನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದನ್ನು ನಾವು ಪರಿಶೀಲಿಸಬೇಕು. ಕೇವಲ ಒಂದು ಜಾಮೀನು ಅರ್ಜಿಯ ತೀರ್ಪನ್ನು 100 ಪುಟಗಳ ಆದೇಶದಲ್ಲಿ ವಿವರಿಸಲಾಗಿದೆ. ಇದೇ ಆಶ್ಚರ್ಯಕರ. 100 ಪುಟಗಳ ಆದೇಶವನ್ನು ನಾವು ಪರಿಶೀಲಿಸುತ್ತೇವೆ’ ಎಂದು ಸುಪ್ರೀಂ ಕೋರ್ಟ್‌ ಪೀಠವು ಹೇಳಿತು.ಈ ಸಂಬಂದ ಆರೋಪಿ ವಿದ್ಯಾರ್ಥಿಗಳಿಗೆ ಪೀಠವು ನೋಟಿಸ್ ನೀಡಿದೆ. ನಾಲ್ಕು ವಾರಗಳಲ್ಲಿ ಈ ನೋಟಿಸ್‌ಗೆ ಉತ್ತರಿಸುವಂತೆ ಸೂಚನೆ ನೀಡಿದೆ. ಜುಲೈ 3ನೇ ವಾರದಲ್ಲಿ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.