ADVERTISEMENT

ಕರ್ನಾಟಕದ ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

ವಿಶೇಷ ನ್ಯಾಯಾಲಯ ಜಯಲಲಿತಾಗೆ ವಿಧಿಸಿದ್ದ ದಂಡ ವಸೂಲಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 19:50 IST
Last Updated 28 ಸೆಪ್ಟೆಂಬರ್ 2018, 19:50 IST
ಜಯಲಲಿತಾ
ಜಯಲಲಿತಾ   

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ.ಜಯಲಲಿತಾ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ವಿಧಿಸಿದ್ದ ₹100 ಕೋಟಿ ದಂಡ ವಸೂಲಿ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗದು’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ತಿಳಿಸಿದೆ.

ಇದರಿಂದಾಗಿ ದಂಡ ವಸೂಲಿ ಮಾಡಬೇಕೆಂಬ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆದಂತಾಗಿದೆ.

ADVERTISEMENT

ಅಕ್ರಮ ಆಸ್ತಿ ಗಳಿಕೆ ಆರೋಪದ ವಿಚಾರಣೆ ನಡೆಸಿದ್ದ ಬೆಂಗಳೂರಿನ ವಿಶೇಷ ನ್ಯಾಯಾಲಯವು, ಜಯಲಲಿತಾ ಹಾಗೂ ಇತರ ಮೂವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು ಜಯಲಲಿತಾಗೆ ₹ 100 ಕೋಟಿ ದಂಡ ವಿಧಿಸಿ 2014ರ ಸೆಪ್ಟೆಂಬರ್‌ನಲ್ಲಿ ಆದೇಶ ನೀಡಿತ್ತು.

ಈ ಕುರಿತ ಮೇಲ್ಮನವಿಯ ವಿಚಾ‌ರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ವಿಶೇಷ ನ್ಯಾಯಾಲಯದ ಆದೇಶ ವಜಾಗೊಳಿಸಿತ್ತಲ್ಲದೆ, ನಾಲ್ವರನ್ನೂ ಆರೋಪ ಮುಕ್ತಗೊಳಿಸಿ 2015ರ ಜನವರಿ 5ರಂದು ತೀರ್ಪು ನೀಡಿತ್ತು.

ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿ 2017ರ ಫೆಬ್ರುವರಿ 14ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ಶಶಿಕಲಾ ನಟರಾಜನ್, ಇಳವರಸಿ ಮತ್ತು ಸುಧಾಕರನ್ ಅವರಿಗೆ ಶಿಕ್ಷೆ ವಿಧಿಸಿತ್ತು. 2016ರ ಡಿಸೆಂಬರ್ 5ರಂದು ಜಯಲಲಿತಾ ಅವರು ಮೃತಪಟ್ಟಿದ್ದರಿಂದ ಅವರನ್ನು ದೋಷಮುಕ್ತಗೊಳಿಸಿತ್ತು. ಜಯಲಲಿತಾ ಅವರಿಗೆ ವಿಧಿಸಲಾಗಿರುವ ₹100 ಕೋಟಿ ದಂಡ ವಸೂಲಿ ಮಾಡಬೇಕಿದ್ದು, ‘ದೋಷಿ’ ಎಂದು ಪರಿಗಣಿಸುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯೂ ತಿರಸ್ಕೃತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.