ADVERTISEMENT

ಬಡ್ತಿ ಮೀಸಲಾತಿ ಕಾಯ್ದೆ ರೂಪಿಸುವಾಗ ತೀರ್ಪುಗಳ ಕಡೆಗಣನೆ: ವಕೀಲ ರಾಜೀವ್ ಧವನ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 16:46 IST
Last Updated 24 ಅಕ್ಟೋಬರ್ 2018, 16:46 IST

ನವದೆಹಲಿ: ‘ಕರ್ನಾಟಕ ಸರ್ಕಾರ, ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸುವ 2002ರ ಕಾಯ್ದೆಯನ್ನು ಜಾರಿಗೊಳಿಸುವಾಗ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಕಡೆಗಣಿಸಿದೆ’ ಎಂದು ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಬಿ.ಕೆ ಪವಿತ್ರ ಅವರ ಪರ ವಕೀಲ ರಾಜೀವ್ ಧವನ್‌ ದೂರಿದರು.

ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌ ಹಾಗೂ ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠದೆದುರು ಬುಧವಾರ ವಾದ ಮುಂದುವರಿಸಿದ ಅವರು, ‘ಆ ಕಾಯ್ದೆಯನ್ನೇ ರದ್ದುಗೊಳಿಸಿ ಕಳೆದ ವರ್ಷ ನೀಡಿರುವ ತೀರ್ಪನ್ನೂ ಲೆಕ್ಕಿಸದೇ ನೂತನ ಕಾಯ್ದೆ ಜಾರಿಗೊಳಿಸುತ್ತಿರುವುದು ಎಷ್ಟು ಸೂಕ್ತ’ ಎಂದು ಪ್ರಶ್ನಿಸಿದರು.

ಬಡ್ತಿ ನೀಡುವಾಗ ಸಾಂದರ್ಭಿಕ ಸೇವಾ ಹಿರಿತನ ಪರಿಗಣಿಸಬೇಕು. ಒಟ್ಟಾರೆ ಕೆನೆಪದರದ ನಿಯಮವನ್ನು ಪಾಲಿಸಬೇಕು ಎಂದು ಬಡಪ್ಪನವರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಲ್ಲಿಯೇ ಉಲ್ಲೇಖಿಸಿದೆ ಎಂದು ಅವರು ವಿವರಿಸಿದರು.

ADVERTISEMENT

ಹಿರಿತನವು ಸೇವೆಯ ಅವಧಿಯನ್ನು ಅವಲಂಬಿಸಿ ನೀಡಲಾಗುವ ಬಡ್ತಿಯ ಮೂಲಕವೇ ದೊರೆಯಬೇಕು ಎಂದೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಉಲ್ಲೇಖವಿದೆ. ಆದರೆ, ರಾಜ್ಯ ಸರ್ಕಾರ ಇದನ್ನು ಮಾನ್ಯ ಮಾಡಿಲ್ಲ ಎಂದು ಅವರು ಆರೋಪಿಸಿದರು.

ಮುಖ್ಯವಾಗಿ ಸೇವಾ ಜ್ಯೇಷ್ಠತೆಯ ಪಟ್ಟಿಯನ್ನು ಪರಿಗಣಿಸಿಯೇ ಬಡ್ತಿ ನೀಡಬೇಕು ಎಂದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಹಾಗೂ ಇತ್ತೀಚಿನ ಎಂ.ನಾಗರಾಜ್‌ ಪ್ರಕರಣ ಒಳಗೊಂಡಂತೆ ವಿವಿಧ ಪ್ರಕರಣಗಳ ತೀರ್ಪುಗಳು ಹೇಳಿವೆ. ಆದರೆ, ಬಡ್ತಿಯಲ್ಲಿ ಮೀಸಲಾತಿ ನೀಡುವ ವಿವಿಧ ಕಾಯ್ದೆಗಳು ಇದನ್ನು ಕಡೆಗಣಿಸಿವೆ ಎಂದು ಅವರು ತಿಳಿಸಿದರು.

ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠವು ಗುರುವಾರಕ್ಕೆ ಮುಂದೂಡಿದ್ದು, ಧವನ್ ವಾದ ಮಂಡನೆ ಮುಂದುವರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.