ADVERTISEMENT

ಸಿಬಿಐ ನಿರ್ದೇಶಕರ ನೇಮಕ: ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ‘

ಪಿಟಿಐ
Published 12 ಮಾರ್ಚ್ 2021, 7:44 IST
Last Updated 12 ಮಾರ್ಚ್ 2021, 7:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕಾಯಂ ನಿರ್ದೇಶಕರೊಬ್ಬರನ್ನು ನೇಮಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

‘ಕಾಮನ್‌ ಕಾಸ್‌’ ಹೆಸರಿನ ಸರ್ಕಾರೇತರ ಸಂಘಟನೆಯೊಂದು ಸಲ್ಲಿಸಿದ ಈ ಅರ್ಜಿಯ ಮೇರೆಗೆ ಎರಡು ವಾರದೊಳಗೆ ಉತ್ತರ ನೀಡಲು ಸೂಚಿಸಿ ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್‌ ಮತ್ತು ಎಸ್‌.ರವೀಂದ್ರ ಭಟ್‌ ಅವರಿದ್ದ ಪೀಠ ಕೇಂದ್ರಕ್ಕೆ ನೋಟಿಸ್‌ ಜಾರಿಗೊಳಿಸಿತು.

‘ಈ ಹಿಂದಿನ ಸಿಬಿಐ ನಿರ್ದೇಶಕ ರಿಶಿ ಕುಮಾರ್ ಶುಕ್ಲಾ ಅವರ ಅಧಿಕಾರ ಅವಧಿ ಫೆಬ್ರುವರಿ 2ಕ್ಕೆ ಕೊನೆಗೊಂಡಿದೆ.ದೆಹಲಿ ವಿಶೇಷ ಪೊಲೀಸ್‌ ವ್ಯವಸ್ಥೆ (ಡಿಎಸ್‌ಪಿಇ) ಕಾಯ್ದೆಯ 4ಎ ಸೆಕ್ಷನ್‌ನ ಪ್ರಕಾರ, ಸಿಬಿಐಗೆ ಕಾಯಂ ನಿರ್ದೇಶಕರೊಬ್ಬರನ್ನು ನೇಮಿಸಲು ಸರ್ಕಾರ ವಿಫಲವಾಗಿದೆ‘ ಎಂದು ಅರ್ಜಿದಾರರು ದೂರಿದ್ದರು.‌

ADVERTISEMENT

‘ಕಾಯಂ ನಿರ್ದೇಶಕರೊಬ್ಬರ ನೇಮಕಾತಿ ಆಗದ ಕಾರಣ ಸಿಬಿಐ ಕೆಲಸಗಳಿಗೆ ತೊಂದರೆಯಾಗಿದೆ. ಮುಂದಿನ ವಾರವೇ ಈ ವಿಚಾರವನ್ನು ಮತ್ತೆ ಕೈಗೆತ್ತಿಕೊಳ್ಳಬೇಕು’ ಎಂದು ಎನ್‌ಜಿಒ ಪರ ವಕೀಲ ಪ್ರಶಾಂತ್‌ ಭೂಷಣ್‌ ಕೋರಿದರು.

‘ಮರಾಠಾ ಮೀಸಲಾತಿ ವಿಷಯದ ಬಗ್ಗೆ ನ್ಯಾಯಪೀಠ ಕಲಾಪ ನಡೆಸಲಿರುವುದರಿಂದ ಮುಂದಿನ ವಾರ ಪೀಠದಿಂದ ಈ ವಿಚಾರವನ್ನು ಕೈಗೆತ್ತಿಕೊಳ್ಳುವುದು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿತು. ಹಾಗಿದ್ದರೆ ಸಿಬಿಐ ನಿರ್ದೇಶಕರ ಆಯ್ಕೆಗಾಗಿ ಆಯ್ಕೆ ಸಮಿತಿಯ ಸಭೆಯನ್ನಾದರೂ ಕರೆಯಲು ಕೇಂದ್ರಕ್ಕೆ ತಿಳಿಸಿ ಎಂದು ಪ್ರಶಾಂತ್ ಭೂಷಣ್ ಕೋರಿದರು.

‘ನಾವು ಕೇಂದ್ರವನ್ನು ವಿಚಾರಿಸಲಿದ್ದೇವೆ, ನಾವು ನೋಟಿಸ್‌ ಜಾರಿಗೊಳಿಸುತ್ತಿದ್ದೇವೆ’ ಎಂಧು ಪೀಠ ಉತ್ತರಿಸಿತು.

ಸಿಬಿಐ ನಿರ್ದೇಶಕರ ಸ್ಥಾನ ತೆರವಾಗುವುದಕ್ಕೆ ಕನಿಷ್ಠ 1ರಿಂದ 2 ತಿಂಗಳ ಮುಂಚಿತವಾಗಿಯೇ ಹೊಸ ನಿರ್ದೇಶಕರ ಆಯ್ಕೆಗೆ ಕೇಂದ್ರ ಕ್ರಮ ಆರಂಭಿಸುವ ನಿಟ್ಟಿನಲ್ಲೂ ಕೇಂದ್ರಕ್ಕೆ ನೀರ್ದೇಶಕ ನೀಡಬೇಕು ಎಂದು ಪ್ರಶಾಂತ್‌ ಭೂಷಣ್‌ ಅವರು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.