ADVERTISEMENT

‘ಥಗ್ ಲೈಫ್’ ಬಿಡುಗಡೆಗೆ ಬೆದರಿಕೆ ಆರೋಪ: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದ SC

ಪಿಟಿಐ
Published 13 ಜೂನ್ 2025, 12:32 IST
Last Updated 13 ಜೂನ್ 2025, 12:32 IST
<div class="paragraphs"><p>‘ಥಗ್ ಲೈಪ್‌‘ </p></div>

‘ಥಗ್ ಲೈಪ್‌‘

   

ನವದೆಹಲಿ: ಕರ್ನಾಟಕದ ಚಿತ್ರಮಂದಿರಗಳಲ್ಲಿ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಬೆದರಿಕೆ ಇದ್ದು, ರಕ್ಷಣೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.

ಹಾಸನ್ ನಟಿಸಿ, ಮಣಿರತ್ನಂ ನಿರ್ದೇಶಿಸಿರುವ ತಮಿಳು ಚಿತ್ರದ ಪ್ರದರ್ಶನದ ಮೇಲಿನ ನಿಷೇಧವನ್ನು ಪ್ರಶ್ನಿಸಿ ಎಂ. ಮಹೇಶ್ ರೆಡ್ಡಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರ ಪೀಠವು ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮುಂದಿನ ಮಂಗಳವಾರಕ್ಕೆ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿದೆ.

ADVERTISEMENT

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಚಿತ್ರಕ್ಕೆ ಪ್ರಮಾಣಪತ್ರ ನೀಡಿದ್ದರೂ, ಕರ್ನಾಟಕ ಸರ್ಕಾರವು ಯಾವುದೇ ಅಧಿಕೃತ ನಿಷೇಧ ಹೇರದೆಯೂ ಮೌಖಿಕ ಸೂಚನೆಗಳು ಮತ್ತು ಪೊಲೀಸ್ ಹಸ್ತಕ್ಷೇಪದ ಮೂಲಕ ಚಿತ್ರದ ಬಿಡುಗಡೆಯನ್ನು ತಡೆದಿದೆ ಎಂದು ವಕೀಲ ಎ. ವೇಲನ್ ಮೂಲಕ ರೆಡ್ಡಿ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಲಾಗಿದೆ.

ರಾಜ್ಯದ ಇಂತಹ ಕ್ರಮಗಳು ಸಂವಿಧಾನದ 19(1)(ಎ) ವಿಧಿಯ ಅಡಿಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅಸಂವಿಧಾನಿಕ ನಿರ್ಬಂಧಕ್ಕೆ ಸಮನಾಗಿರುತ್ತದೆ ಎಂದು ವೇಲನ್ ವಾದಿಸಿದ್ದಾರೆ.

ಹಿಂಸಾಚಾರದ ಬೆದರಿಕೆ ಅಡಿಯಲ್ಲಿ ಚಿತ್ರದ ಬಿಡುಗಡೆಗೆ ತಡೆ ಹಾಕಲಾಗಿದೆ. ಯಾವುದೇ ಕಾನೂನು ಪ್ರಕ್ರಿಯೆಯಿಂದ ತಡೆ ಹಾಕಿಲ್ಲ. ಗಿ ಸಿನಿಮಾ ಮಂದಿರಗಳಿಗೆ ಬೆಂಕಿ ಹಚ್ಚುವ ಸ್ಪಷ್ಟ ಬೆದರಿಕೆ, ಭಾಷಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದೊಡ್ಡ ಪ್ರಮಾಣದ ಹಿಂಸಾಚಾರದ ಪ್ರಚೋದನೆ ಸೇರಿದಂತೆ ಉದ್ದೇಶಪೂರ್ವಕ ಅಭಿಯಾನ ನಡೆಸಲಾಗಿದೆ ಎಂದು ವಾದಿಸಲಾಗಿದೆ.

ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರ ಪ್ರದರ್ಶನದ ಮೇಲಿನ ನಿಷೇಧವು ಕಾನೂನುಬಾಹಿರ, ಅಸಂವಿಧಾನಿಕ ಎಂದೂ ವಾದಿಸಲಾಗಿದೆ.

ಈ ಸಂಬಂಧ ಕರ್ನಾಟಕದಾದ್ಯಂತ ಎಲ್ಲ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರದ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಪ್ರದರ್ಶನವನ್ನು ಖಚಿತಪಡಿಸಿಕೊಳ್ಳಲು ಹಾಗೂ ಕಾನೂನುಬದ್ಧವಾಗಿ ಪ್ರಮಾಣೀಕರಿಸಲ್ಪಟ್ಟ ಚಿತ್ರಕ್ಕೆ ಅಂತಹ ಬೆದರಿಕೆಗಳು ಮರುಕಳಿಸದಂತೆ ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರು ಸೇರಿದಂತೆ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡುವಂತೆ ಕೋರಲಾಗಿದೆ.

ಕನ್ನಡವು ತಮಿಳಿನಿಂದ ಹುಟ್ಟಿದೆ ಎಂದು ನಟ ಕಮಲ್ ಹಾಸನ್ ಹೇಳಿಕೆ ಬಳಿಕ ಥಗ್ ಲೈಫ್ ಬಿಡುಗಡೆಗೆ ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಕುರಿತಂತೆ ಕ್ಷಮೆ ಕೋರದ ಕಮಲ್ ಹಾಸನ್ ಧೋರಣೆಯನ್ನು ಹೈಕೋರ್ಟ್ ಸಹ ಖಂಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.