ADVERTISEMENT

ಅರಣ್ಯ ಒತ್ತುವರಿ ಪ್ರಕರಣ: ಕರ್ನಾಟಕ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 16:16 IST
Last Updated 8 ಜನವರಿ 2023, 16:16 IST
   

ನವದೆಹಲಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ಮತ್ತಿತರರ ವಿರುದ್ಧದ ಅನಧಿಕೃತ ಸಾಗುವಳಿ ಮತ್ತು ಅರಣ್ಯ ಭೂಮಿ ಒತ್ತುವರಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌, ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಶಾಸಕರು ಸೇರಿ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದ ಮನವಿಯನ್ನು ವಜಾಗೊಳಿಸಿದ್ದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಎನ್‌ಜಿಒ ‘ಕಾವೇರಿ ಸೇನೆ’ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಅರ್ಜಿದಾರರ ಪರ ವಕೀಲ ಸಂಜಯ್‌ ಎಂ.ನುಲಿ ಅವರ ವಾದ ಆಲಿಸಿದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠವು, ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ADVERTISEMENT

‘ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿ ಗ್ರಾಮದ ಮೀಸಲು ಅರಣ್ಯ ರಕ್ಷಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, ಕಂದಾಯ ಇಲಾಖೆಯು ಅರಣ್ಯ ಪ್ರದೇಶವನ್ನು ಅತಿಕ್ರಮಣ ಮತ್ತು ಅಕ್ರಮ ಸಾಗುವಳಿ ಮಾಡಿರುವವರಿಗೆ ಸಾಗುವಳಿ ಚೀಟಿ, ಆರ್‌ಟಿಸಿ ನೀಡಿ ಅರಣ್ಯ ಛಿದ್ರಗೊಳಿಸಿದೆ. ಗ್ರಾಮದ ಸರ್ವೆ ನಂಬರ್‌ 289ರ ಮೀಸಲು ಅರಣ್ಯ ಅಪಾಯದಲ್ಲಿದೆ. ಹೈಕೋರ್ಟ್ ತೀರ್ಪು ಕಾರ್ಯಗತಕ್ಕೆ ಅನುಮತಿಸಿದರೆ ಮೀಸಲು ಅರಣ್ಯದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಜೀವ ವೈವಿಧ್ಯಕ್ಕೂ ದೊಡ್ಡ ಹಾನಿ ಉಂಟಾಗಲಿದೆ’ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.