ನವದೆಹಲಿ: ಜಾಮೀನು ಪಡೆದರೂ ವ್ಯಕ್ತಿಯೊಬ್ಬನನ್ನು ಜೈಲಿನಿಂದ ಬಿಡುಗಡೆ ಮಾಡಲು ವಿಳಂಬ ಮಾಡಿದ ಉತ್ತರ ಪ್ರದೇಶದ ಜೈಲು ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ ವ್ಯಕ್ತಿಗೆ ₹5 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
ಸಂವಿಧಾನದ ಅಡಿಯಲ್ಲಿ ಸ್ವಾತಂತ್ರ್ಯವು ಅತ್ಯಂತ ಮೌಲ್ಯಯುತ ಹಕ್ಕು ಎಂದು ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಅಭಿಪ್ರಾಯಪಟ್ಟಿದೆ. ಆ ವ್ಯಕ್ತಿ ಅವರದಲ್ಲದ ಸಮಸ್ಯೆಯಿಂದಾಗಿ ಕನಿಷ್ಠ 28 ದಿನಗಳವರೆಗೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾನೆ ಎಂದು ಪೀಠ ಹೇಳಿದೆ.
ಏಪ್ರಿಲ್ 29ರಂದು ಸುಪ್ರೀಂ ಕೋರ್ಟ್ ಆರೋಪಿಗೆ ಜಾಮೀನು ನೀಡಿತ್ತು. ನಂತರ, ಮೇ 27 ರಂದು ಗಾಜಿಯಾಬಾದ್‌ನ ವಿಚಾರಣಾ ನ್ಯಾಯಾಲಯವು ಬಿಡುಗಡೆ ಆದೇಶವನ್ನು ಹೊರಡಿಸಿತ್ತು. ಆದರೆ, ಜೂನ್ 24ರಂದು ಗಾಜಿಯಾಬಾದ್‌ನ ಜಿಲ್ಲಾ ಕಾರಾಗೃಹದಿಂದ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.
ನ್ಯಾಯಾಲಯದ ಆದೇಶಗಳ ಹೊರತಾಗಿಯೂ ನಿಮ್ಮ ಜೈಲುಗಳಲ್ಲಿ ಎಷ್ಟು ಜನರು ನರಳುತ್ತಿದ್ದಾರೆಂದು ದೇವರೇ ಬಲ್ಲ ಎಂದು ಪೀಠವು ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ವಕೀಲರಿಗೆ ತರಾಟೆಗೆ ತೆಗೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.