ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ಸಾಧ್ಯವೇ?: ಸಂವಿಧಾನ ಪೀಠದಿಂದ ವಿಚಾರಣೆ

ಪಿಟಿಐ
Published 23 ಅಕ್ಟೋಬರ್ 2019, 19:30 IST
Last Updated 23 ಅಕ್ಟೋಬರ್ 2019, 19:30 IST
   

ನವದೆಹಲಿ: ‘ವಿಚಾರಣಾ ಹಂತದಲ್ಲಿರುವ ಸೂಕ್ಷ್ಮ ವಿಷಯಗಳ ಬಗ್ಗೆ ನೀಡುವ ಹೇಳಿಕೆಯು ಇನ್ನೊಬ್ಬ ವ್ಯಕ್ತಿಯ ಘನತೆಯಿಂದ ಜೀವಿಸುವ ಹಕ್ಕಿಗೆ ಧಕ್ಕೆ ತರುವಂತಿದ್ದರೆ, ಅಂಥ ಅಭಿಪ್ರಾಯ ವ್ಯಕ್ತಪಡಿಸುವುದನ್ನು ತಡೆಯಲು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಸಾಧ್ಯವೇ’ ಎಂಬ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಬುಧವಾರ ವಿಚಾರಣೆಯನ್ನು ಆರಂಭಿಸಿದೆ.

ಬುಲಂದ್‌ಶಹರ್‌ನಲ್ಲಿ 2016ರಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಸಚಿವ ಆಜಂ ಖಾನ್‌ ಅವರು ನೀಡಿದ್ದ ಹೇಳಿಕೆಯು ವಿವಾದ ಸೃಷ್ಟಿಸಿ, ಕೋರ್ಟ್‌ ಮೆಟ್ಟಿಲೇರಿತ್ತು. ಇದರ ವಿಚಾರಣೆ ನಡೆಸಿದ್ದ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ವಿಧಿಸಬಹುದೇ’ ಎಂಬುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡುವಂತೆ ಸಂವಿಧಾನ ಪೀಠಕ್ಕೆ ಮನವಿ ಸಲ್ಲಿಸಿತ್ತು.

‘ಸುಪ್ರೀಂ ಕೋರ್ಟ್‌ನ ಪೀಠವು ಕೇಳಿರುವ ಎಲ್ಲಾ ಪ್ರಶ್ನೆಗಳ ಬಗ್ಗೆಯೂ ವಿಸ್ತಾರವಾಗಿ ಚರ್ಚಿಸಲಾಗುವುದು’ ಎಂದು ಸಂವಿಧಾನ ಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಹೇಳಿದರು.

ADVERTISEMENT

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ‘ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣ ಅನಿರ್ಬಂಧಿತವಲ್ಲ. ಸಂವಿಧಾನದ ವಿಧಿ 19(2)ರಲ್ಲಿ ಕೆಲವು ನಿರ್ದಿಷ್ಟ ವಿನಾಯಿತಿ ಗಳನ್ನು ನೀಡಲಾಗಿದೆ’ ಎಂದರು.

ವಿಚಾರಣೆ ಗುರುವಾರವೂ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.