ADVERTISEMENT

ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ವಿರುದ್ಧದ ಲೋಕಪಾಲ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಪಿಟಿಐ
Published 20 ಫೆಬ್ರುವರಿ 2025, 14:01 IST
Last Updated 20 ಫೆಬ್ರುವರಿ 2025, 14:01 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಹೈಕೋರ್ಟ್‌ವೊಂದರ ಹಾಲಿ ಹೆಚ್ಚುವರಿ ನ್ಯಾಯಮೂರ್ತಿಯೊಬ್ಬರ ವಿರುದ್ಧ ಲೋಕಪಾಲ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ತಡೆ ನೀಡಿದೆ.

‘ಇಂಥ ನಡೆ ಆತಂಕ ಮೂಡಿಸುವಂಥದು ಹಾಗೂ ನ್ಯಾಯಾಂಗದ ಸ್ವಾತಂತ್ರ್ಯದ ಕುರಿತು ಚಿಂತೆಗೀಡು ಮಾಡುವಂತಹವುದಾಗಿದೆ’ ಎಂದೂ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ, ಸೂರ್ಯಕಾಂತ ಹಾಗೂ ಅಭಯ್‌ ಎಸ್‌.ಓಕಾ ಅವರು ಇದ್ದ ವಿಶೇಷ ಪೀಠ, ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

ADVERTISEMENT

ಈ ವಿಚಾರವಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ, ಲೋಕಪಾಲ  ರಿಜಿಸ್ಟ್ರಾರ್ ಹಾಗೂ ಹೈಕೋರ್ಟ್‌ನ ಹಾಲಿ ಹೆಚ್ಚುವರಿ ನ್ಯಾಯಮೂರ್ತಿ ವಿರುದ್ಧ ದೂರು ಸಲ್ಲಿಸಿರುವ ವ್ಯಕ್ತಿಗೆ ಪೀಠವು ನೋಟಿಸ್‌ ಜಾರಿ ಮಾಡಿದೆ.

ಅಲ್ಲದೇ, ದೂರು ನೀಡಿರುವ ವ್ಯಕ್ತಿಯು ಹೆಚ್ಚುವರಿ ನ್ಯಾಯಮೂರ್ತಿಯ ಹೆಸರು ಬಹಿರಂಗಪಡಿಸುವುದನ್ನು ನಿರ್ಬಂಧಿಸಿ ಮಧ್ಯಂತರ ತಡೆಯಾಜ್ಞೆ ನೀಡಿದ ಪೀಠವು, ದೂರನ್ನು ಗೌಪ್ಯವಾಗಿಡುವಂತೆಯೂ ದೂರುದಾರನಿಗೆ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ, ‘ಹೈಕೋರ್ಟ್‌ ನ್ಯಾಯಮೂರ್ತಿಗಳು, ‘ಲೋಕಪಾಲ ಹಾಗೂ ಲೋಕಾಯುಕ್ತರ ಕಾಯ್ದೆ–2013’ರ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಸಾಲಿಸಿಟರ್‌ ಜನರಲ್ ತುಷಾರ್ ಮೆಹ್ತಾ, ಪೀಠಕ್ಕೆ ತಿಳಿಸಿದರು.

ಆಗ, ಈ ಅರ್ಜಿ ವಿಚಾರಣೆಗೆ ಸಂಬಂಧಿಸಿ, ನ್ಯಾಯಪೀಠಕ್ಕೆ ನೆರವು ನೀಡಲು ಬಯಸುವೆ. ಲೋಕಪಾಲದ ಈ ಕ್ರಮ ಅಪಾಯದಿಂದ ಕೂಡಿದೆ. ಈ ಕುರಿತು ಕಾಯ್ದೆಯೊಂದನ್ನು ರೂಪಿಸುವ ಅಗತ್ಯವಿದೆ’ ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್ ಹೇಳಿದರು.

‘ಈ ವಿಚಾರ ಕುರಿತು ಸಿಜೆಐ ನೀಡುವ ನಿರ್ದೇಶನಗಳಿಗೆ ಕಾಯೋಣ’ ಎಂದ ಪೀಠವು, ವಿಚಾರಣೆಯನ್ನು ಮಾರ್ಚ್‌ 18ಕ್ಕೆ ಮುಂದೂಡಿತು. 

ಪ್ರಕರಣವೇನು?: ದೂರುದಾರನ ವಿರುದ್ಧ ಖಾಸಗಿ ಕಂಪನಿಯೊಂದು ಪ್ರಕರಣ ದಾಖಲಿಸಿತ್ತು. ಹೈಕೋರ್ಟ್‌ವೊಂದರ ನ್ಯಾಯಮೂರ್ತಿಯೊಬ್ಬರು ಈ ಅರ್ಜಿ ವಿಚಾರಣೆ ನಡೆಸಬೇಕಿತ್ತು.

ಕಂಪನಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ, ಹೈಕೋರ್ಟ್‌ವೊಂದರ ಹಾಲಿ ಹೆಚ್ಚುವರಿ ನ್ಯಾಯಮೂರ್ತಿಯೊಬ್ಬರು, ಜಿಲ್ಲಾ ನ್ಯಾಯಾಲಯವೊಂದರ ಹೆಚ್ಚುವರಿ ನ್ಯಾಯಾಧೀಶ ಹಾಗೂ ಅರ್ಜಿ ವಿಚಾರಣೆ ನಡೆಸಬೇಕಿದ್ದ ಹೈಕೋರ್ಟ್‌ನ ನ್ಯಾಯಮೂರ್ತಿ ಮೇಲೆ ಪ್ರಭಾವ ಬೀರಿದ್ದರು ಎಂದು ಅರ್ಜಿದಾರ ಎರಡು ಪ್ರತ್ಯೇಕ ದೂರು ದಾಖಲಿಸಿದ್ದರು.

ಈ ದೂರುಗಳನ್ನು ಪರಿಗಣಿಸಿದ್ದ ಲೋಕಪಾಲ, ಹಾಲಿ ಹೆಚ್ಚುವರಿ ನ್ಯಾಯಮೂರ್ತಿ ವಿರುದ್ಧ ಜ.27ರಂದು ಆದೇಶ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.