ADVERTISEMENT

ಹೆಚ್ಚುವರಿ ಮೊತ್ತದ ಔಷಧ: ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ಪಿಟಿಐ
Published 26 ಫೆಬ್ರುವರಿ 2025, 14:26 IST
Last Updated 26 ಫೆಬ್ರುವರಿ 2025, 14:26 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ವಂಶವಾಹಿಯಿಂದಾಗಿ ಬರುವ ಬೆನ್ನುಹುರಿಯ ಸಮಸ್ಯೆಯೊಂದನ್ನು ಎದುರಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಗರಿಷ್ಠ ಮಿತಿಯನ್ನು ಮೀರಿ ₹18 ಲಕ್ಷ ಮೌಲ್ಯದ ಔಷಧಗಳನ್ನು ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಕಾಯಿಲೆಗೆ ಚಿಕಿತ್ಸೆ ಒದಗಿಸಲು ಕೇಂದ್ರ ಸರ್ಕಾರದಿಂದ ಗರಿಷ್ಠ ₹50 ಲಕ್ಷದವರೆಗೆ ನೆರವು ನೀಡಲು ನಿಯಮಗಳಲ್ಲಿ ಅವಕಾಶ ಇದೆ. 

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠವು ಕೇರಳ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಿದೆ.

ADVERTISEMENT

24 ವರ್ಷ ವಯಸ್ಸಿನ ಸೆಬಾ ಪಿ.ಎ. ಅವರಿಗೆ ಚಿಕಿತ್ಸೆ ಮುಂದುವರಿಸಲು ಒಂದು ಬಾರಿಯ ಕ್ರಮವಾಗಿ ರಿಸ್ಡಿಪ್ಲಾಮ್ ಔಷಧವನ್ನು ನೀಡಬೇಕು ಎಂದು ಹೈಕೋರ್ಟ್‌ ಹೇಳಿತ್ತು.

ಈ ಔಷಧದ ಒಂದು ಬಾಟಲಿಗೆ ₹6.2 ಲಕ್ಷ ಬೆಲೆ ಇದೆ. 20 ಕೆ.ಜಿ.ಗಿಂತ ಕಡಿಮೆ ತೂಕ ಇರುವ ವ್ಯಕ್ತಿಗಳಿಗೆ ತಿಂಗಳಿಗೆ ಒಂದು ಬಾಟಲಿ ಔಷಧಿ ನೀಡಬೇಕಾಗುತ್ತದೆ. ಹೆಚ್ಚು ತೂಕ ಇರುವವರಿಗೆ ಮೂರು ಬಾಟಲಿಗಳವರೆಗೆ ಬೇಕಾಗುತ್ತದೆ. ಇದರಿಂದಾಗಿ ಈ ಕಾಯಿಲೆಗೆ ದೀರ್ಘ ಅವಧಿಯವರೆಗೆ ಚಿಕಿತ್ಸೆ ಒದಗಿಸುವುದು ಹಣಕಾಸಿನ ದೃಷ್ಟಿಯಿಂದ ಭಾರಿ ಹೊರೆ.

ರೋಗಿಗಳಿಗೆ ₹50 ಲಕ್ಷದವರೆಗೆ ಮಾತ್ರ ನೆರವು ಒದಗಿಸಲು ಅವಕಾಶ ಇದೆ ಎಂದು ಕೇಂದ್ರವು ಪೀಠಕ್ಕೆ ತಿಳಿಸಿತು.

ಪ್ರಕರಣವನ್ನು ಪರಿಶೀಲಿಸಿ ₹50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವೆಚ್ಚಗಳನ್ನು ಭರಿಸಲು ಅನುಮತಿ ನೀಡುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಕೇಂದ್ರಕ್ಕೆ ಪೀಠವು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.