ADVERTISEMENT

ಸುರಕ್ಷೆ ಇಲ್ಲದೆ ಮ್ಯಾನ್‌ಹೋಲ್‌ಗೆ ಕಾರ್ಮಿಕ: ‘ಸುಪ್ರೀಂ’ ಆಕ್ರೋಶ

‘ಯಾವ ದೇಶವೂ ಜನರನ್ನು ಗ್ಯಾಸ್‌ ಚೇಂಬರ್‌ಗೆ ಕಳುಹಿಸುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 20:01 IST
Last Updated 18 ಸೆಪ್ಟೆಂಬರ್ 2019, 20:01 IST
   

ನವದೆಹಲಿ: ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿದ್ದರೂ ಅಗತ್ಯ ರಕ್ಷಣಾ ಸೌಲಭ್ಯಗಳನ್ನು ನೀಡದೆಯೇ ಜನರನ್ನು ಮ್ಯಾನ್‌ಹೋಲ್‌ಗೆ ಇಳಿಸುವ ಅಮಾನವೀಯ ಮತ್ತು ಅನಾಗರಿಕ ಪದ್ಧತಿ ಉಳಿದುಕೊಂಡಿರುವುದಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ಆಕ್ರೋಶ ವ್ಯಕ್ತಪಡಿಸಿತು.

1989ರ ಎಸ್‌ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು 2018ರ ಮಾರ್ಚ್‌ 20ರಂದು ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವಂತೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಾ ಕೋರ್ಟ್‌ ಈ ಆತಂಕ ವ್ಯಕ್ತಪಡಿಸಿತು.

‘ಆಧುನಿಕ ರಕ್ಷಣಾ ಸಾಮಗ್ರಿಗಳನ್ನು ನೀಡದೆಯೇ ಜನರನ್ನು ಮ್ಯಾನ್‌ಹೋಲ್‌ಗೆ ಇಳಿಸಲಾಗುತ್ತಿದೆ. ಜಗತ್ತಿನ ಯಾವ ದೇಶವೂ ಈ ರೀತಿಯಾಗಿ ಜನರನ್ನು ‘ಗ್ಯಾಸ್‌ ಚೇಂಬರ್‌ಗೆ’ ಕಳುಹಿಸಿ ಸಾಯಿಸುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಎಂ.ಆರ್‌. ಶಾ ಹಾಗೂ ಬಿ.ಆರ್. ಗವಾಯಿ ಅವರ ಪೀಠ ಹೇಳಿತು.

ADVERTISEMENT

‘ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆ ಇನ್ನೂ ಹೋಗಿಲ್ಲ. ಮ್ಯಾನ್‌ಹೋಲ್‌ಗೆ ಇಳಿದು ಶುಚಿಗೊಳಿಸುವ ಕೆಲಸದಲ್ಲಿ ತೊಡಗಿರುವವರ ಕೈ ಕುಲುಕಲು ಜನರು ಈಗಲೂ ಹಿಂಜರಿಯುತ್ತಾರೆ. ಮ್ಯಾನ್‌ಹೋಲ್‌ಗೆ ಇಳಿದ ಐವರು ಸಾವನ್ನಪ್ಪಿದ ಘಟನೆ ಇತ್ತೀಚೆಗಷ್ಟೇ ನಡೆದಿದೆ ಎಂದು ಪೀಠವು ಪತ್ರಿಕಾ ವರದಿಯೊಂದನ್ನು ಉಲ್ಲೇಖಿಸಿ ಹೇಳಿತು.

ಎಸ್‌ಸಿ/ಎಸ್‌ಟಿ ದೌರ್ಜನ್ಯ (ತಡೆ) ಕಾಯ್ದೆಗೆ ಸಂಬಂಧಿಸಿ 2018ರಲ್ಲಿ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ಟೀಕಿಸಿದ ಕೋರ್ಟ್‌, ‘ಕಾನೂನಿನ ದುರುಪಯೋಗವಾಗಿದೆ ಎಂಬ ಕಾರಣಕ್ಕೆ ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾದ ಆದೇಶವನ್ನು ನೀಡಲು ಸಾಧ್ಯವೇ? ಐಪಿಸಿ ಕಾಯ್ದೆಯಡಿ ಸಾಮಾನ್ಯ ವರ್ಗದ ವ್ಯಕ್ತಿಯೂ ಸುಳ್ಳು ದೂರುಗಳನ್ನು ನೀಡಬಹುದಲ್ಲ’ ಎಂದು ಪ್ರಶ್ನಿಸಿತು.

ಕಾನೂನಿನ ಕೊರತೆ

ಮ್ಯಾನ್‌ಹೋಲ್‌ಗೆ ಇಳಿದು ಮಾತ್ರವಲ್ಲ, ರಸ್ತೆ ಗುಂಡಿಗಳಲ್ಲಿ ಬಿದ್ದು ಸಹ ಜನರು ಸಾಯುತ್ತಿದ್ದಾರೆ. ಆದರೆ ಇಂಥ ಘಟನೆ ನಡೆದಾಗ ಮೇಲ್ವಿಚಾರಕನನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಲು ಸಾಧ್ಯವಾಗುವಂಥ ಬಲಿಷ್ಠ ಕಾನೂನು ಇಲ್ಲ ಎಂದು ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರು ಕೋರ್ಟ್‌ ಗಮನಕ್ಕೆ ತಂದರು.

‘ಸ್ವಚ್ಛತಾ ಕೆಲಸದಲ್ಲಿ ತೊಡಗಿರುವವರ ಅಗತ್ಯಗಳನ್ನು ಈಡೇರಿಸಲು, ಅವರಿಗೆ ರಕ್ಷಣೆ ನೀಡಲು ನಿಮ್ಮಿಂದ ಸಾಧ್ಯವಾಗಿಲ್ಲ. ನಿಮ್ಮ ಸಮಸ್ಯೆಗಳೇನು ಎಂಬುದನ್ನು ನಮಗೆ ಲಿಖಿತ ರೂಪದಲ್ಲಿ ಕೊಡಿ. ಆ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ’ ಎಂದು ಪೀಠ ಖಾರವಾಗಿ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.